ಸೆಪ್ಟೆಂಬರ್ ಮೊದಲ ವಾರ ಜಯದೇವ ಆಸ್ಪತ್ರೆ ಲೋಕಾರ್ಪಣೆ
ಕಲಬುರಗಿ:ಜೂ.17: ಬರುವ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಇಂದಿಲ್ಲಿ ಜಯದೇವ ಆಸ್ಪತ್ರೆಯ ಕಾಮಗಾರಿ ಪ್ರಗತಿ ಪರಿಶೀಲನೆ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮುಂಚೆ ಜುಲೈ ತಿಂಗಳಲ್ಲಿ ಆಸ್ಪತ್ರೆ ಲೋಕಾರ್ಪಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.ಆದರೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ.ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬೇಕಾದ್ದರಿಂದ ಆದಷ್ಟೂ ಸೆಪ್ಟೆಂಬರ್ ಮೊದಲ ವಾರದಲ್ಲೇ ಉದ್ಘಾಟನೆ ನೆರವೇರಿಸಲಾಗುವುದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಆಶೀರ್ವದಿಸಿದ ಕಲಬುರಗಿ ಲೋಕಸಭಾ ಕ್ಷೇತ್ರದ ಜನರ ಋಣ ತೀರಿಸುವ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳಲ್ಲಿ 371 ಹಾಸಿಗೆ ಸಾಮಥ್ರ್ಯದ ಜಯದೇವ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಜನರಿಗೆ ಸೇವೆಗಾಗಿ ಒದಗಿಸಲಾಗುತ್ತಿದೆ ಎಂದು ಮುಗುಳ್ನಗುತ್ತಾ ನುಡಿದರು.
ಇದರ ಜೊತೆಗೆ, ಈ ಭಾಗದ ಜನರಿಗೆ ಕೃತಜ್ಞತೆ ಸಲ್ಲಿಸಲು ಮುಂದಿನ ಒಂದು-ಒಂದುವರೆ ತಿಂಗಳಲ್ಲಿ 150 ಹಾಸಿಗೆ ಸಾಮಥ್ರ್ಯದ ಕ್ಯಾನ್ಸರ್‍ಆಸ್ಪತ್ರೆ ಮತ್ತು 200 ಹಾಸಿಗೆ ಸಾಮಥ್ರ್ಯದ ತಾಯಿ-ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು ನೆರವೇರಿಸಲಾಗುವುದು. ಇದರ ಜೊತೆಗೆ ಮುಂದಿನ ಒಂದು ವಾರದಲ್ಲಿ ಸುಟ್ಟ ಗಾಯಗಳ ವಾರ್ಡ್ ಮತ್ತು 50 ಹಾಸಿಗೆ ಸಾಮಥ್ರ್ಯದ ತುರ್ತು ಚಿಕಿತ್ಸಾ ಕೇಂದ್ರ (ಕ್ರಿಟಿಕಲ್‍ಕೇರ್‍ಯೂನಿಟ್) ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಸಹ ಡಾ.ಶರಣಪ್ರಕಾಶ್ ಮಾಹಿತಿ ನೀಡಿದರು.
ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ಮೊದಲು ಅವರಿಗೆ ನರೇಂದ್ರ ಮೋದಿ ಅವರ ಕಚೇರಿಎದುರು ಪ್ರತಿಭಟನೆ ನಡೆಸಿ ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ಹೇಳಿ ಎಂದು ನುಡಿದರು.
ಜಿಮ್ಸ್ ಪ್ರಕರಣ: ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ
ರೋಗಿಯೊಬ್ಬರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ಸ್ ಆಸ್ಪತ್ರೆಯ ಸಿ.ಸಿ.ಟಿ.ವಿ. ದೃಶ್ಯಾವಳಿ ಪರಿಶೀಲನೆಯ ಜೊತೆಗೆ ಸತ್ಯಾಸತ್ಯತೆ ಏನೆಂಬುದರ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಮಜಾಯಿಷಿ ನೀಡಿದರು.
ರೋಗಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರು ಸೇರಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಘಟನೆ ತಮ್ಮ ಗಮನಕ್ಕೆ ಬಂದಿದೆ. ತಪ್ಪು ನಡೆದಿದ್ದರೆ ಖಂಡಿತ ಕ್ರಮ ಜರುಗಿಸಲಾಗುವುದು ಎಂದರು.