ಜಾತಿ ಪದ್ಧತಿ ನಿರ್ಮೂಲನೆಗೆ ಅಂತರ್ ಜಾತಿ ವಿವಾಹಕ್ಕೆ ಹೆಚ್ಚು ಪ್ರೋತ್ಸಾಹಿಸಬೇಕು: ಸಿದ್ಧರಾಮಯ್ಯ
ವಿಜಯಪುರ,17: ಸಮಾಜದಲ್ಲಿ ಜಾತಿ ಪದ್ಧತಿ ಹೋಗಲಾಡಿಸಲು ಅಂತರ್ ಜಾತಿ ವಿವಾಹಗಳಿಗೆ ಹೆಚ್ಚೆಚ್ಚು ಪ್ರೋತ್ಸಾಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಜಿಲ್ಲೆಯ ಚಡಚಣ ತಾಲೂಕಿನ ಸುಕ್ಷೇತ್ರ ಇಂಚಗೇರಿಯಲ್ಲಿ ಹಮ್ಮಿಕೊಂಡ ಮಾಧವಾನಂದ ಪ್ರಭುಗಳ ದೇವಾಲಯ ಲೋಕಾರ್ಪಣೆ, ಕಳಸಾರೋಹಣ ಹಾಗೂ ಶ್ರೀಗಳ 44 ನೇ ಪುಣ್ಯಸ್ಮರಣೆ ಸಪ್ತಾಹ ಹಾಗೂ ಇಂಚಗೇರಿಯಲ್ಲಿ ನಿರ್ಮಿಸಿದ ಸಂಗೊಳ್ಳಿ ರಾಯಣ್ಣವರ ಪ್ರತಿಮೆ ಅನಾವರಣ ಸಮಾರಂಭಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಅಂತÀರ್ಜಾತಿ ವಿವಾಹಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದೇ ಮಾಧವಾನಂದ ಪ್ರಭುಜಿಗಳ ಆಶಯವಾಗಿತ್ತು. ಹಾಗಾಗಿ ಅಂತರಜಾತಿ ವಿವಾಹಗಳಿಗೆ ಹೆಚ್ಚು ಪ್ರೋತ್ಸಾಹಿಸಬೇಕು. ಇದು ಮಾಧವಾನಂದ ಪ್ರಭಜಿಗಳಿಗೆ ಸಲ್ಲಿಸುವ ನಿಜವಾದ ಗೌರವ ಎಂದು ನುಡಿದರು.
ಇಂದು ನಾವು ಅಣ್ಣ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡುತ್ತೇವೆ. ನಂತರ ಅವರ ತತ್ವ ಬಿಟ್ಟು ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿ ಬಿಡುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು.
ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣದ ಕನಸು ಅಣ್ಣ ಬಸವಣ್ಣನವರು, ಮಾಧವಾನಂದ ಸ್ವಾಮೀಜಿ ಕಂಡಿದ್ದರು. ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಎಂದೆಣಿಸಯ್ಯ ಎಂದು ಬಸವಾದಿ ಶರಣರ ತತ್ವಸಾರವನ್ನೇ 21 ನೇ ಶತಮಾನದಲ್ಲಿ ಮಾಧವಾನಂದ ಪ್ರಭುಗಳು ಸಾರಿದರು. ಸಾವಿರಾರು ಅಂತರ್ ಜಾತಿ ವಿವಾಹ ಮಾಡುವ ಮೂಲಕ ಅಣ್ಣನ ಆಶಯವನ್ನು ಸಾಕಾರಗೊಳಿಸಿದರು ಎಂದರು.
ನಾವೆಲ್ಲರೂ ಮನುಷ್ಯರೇ, ಆದರೆ ಜಾತಿಗಳು ಏಕೆ ರೂಪುಗೊಂಡವು. ನಮ್ಮ ಪೂರ್ಜಜರು ಚತುವರ್ಣ ವ್ಯವಸ್ಥೆ ರೂಪಿಸಿದರು, ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯರಿಗೆ ಎಲ್ಲ ಸವಲತ್ತುಗಳಿದ್ದವು, ಶೂದ್ರರಿಗೆ ಯಾವ ಸೌಲಭ್ಯವೂ ಇರಲಿಲ್ಲ, ಉತ್ಪಾದನೆ ಮಾಡುವುದು ಅವರ ಕೆಲಸವಾಗಿತ್ತು, ಆದರೆ ಉಪಭೋಗ ಮಾಡಲು ಸಾಧ್ಯವಿರದಂತಹ ಕೆಟ್ಟ ಪರಿಸ್ಥಿತಿ ಇತ್ತು ಎಂದರು.
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರ ಚನ್ನಮ್ಮ ಅವರು ಸ್ವಾರ್ಥಕ್ಕಾಗಿ ಹೋರಾಟ ಮಾಡಲಿಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು.
ಮಾಧವಾನಂದ ಪ್ರಭುಜೀ ಅವರು ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಂಡು ಬದುಕಿದವರು, ಪ್ರತಿಯೊಬ್ಬರು ಈ ನಡೆಯನ್ನು ಅನುಸರಿಸಬೇಕು ಎಂದರು.
ಯಾರು ಇಂತಹದ್ದೇ ಜಾತಿಯಲ್ಲಿ ಜನಿಸಬೇಕು ಎಂದು ಅರ್ಜಿ ಹಾಕಿಲ್ಲ, ಆಪರೇಷನ್ ಮಾಡುವ ಡಾಕ್ಟರ್, ರಕ್ತ ಪಡೆದುಕೊಳ್ಳುವ ವ್ಯಕ್ತಿಯ ಜಾತಿ ನೋಡುವುದಿಲ್ಲ. ಕುರುಬರಿಗೆ ಕುರುಬರ ರಕ್ತ, ಬ್ರಾಹ್ಮಣರಿಗೆ ಬ್ರಾಹ್ಮಣರ ರಕ್ತ ಕೊಡು ಎಂದು ಕೇಳುವುದಿಲ್ಲ, ಆದರೆ ಬದುಕಿದ ಮೇಲೆ ಲಿಂಗಾಯತ, ನೀನು ದಲಿತ ಎಂದು ಹೇಳುತ್ತೇವಲ್ಲ ಇದು ಸ್ವಾರ್ಥವಲ್ಲವೇ ? ಮನುಷ್ಯರು ಮನುಷ್ಯರಾಗಿ ಬಾಳಬೇಕಿದೆ, ನಾವು ದಾನವರಾಗಬಾರದು, ನಾವು ಮಾನವರಾಗಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆ ಜನರು ವೋಟ್ ಕೊಡದೇ ಹೋಗಿರಬಹುದು, ಆದರೆ ಈ ಯೋಜನೆಯನ್ನು ಎಲ್ಲರಿಗೂ ಕೊಡುತ್ತಿದ್ದೇವೆ, ಒಂದೇ ಜಾತಿಗೆ ಸೀಮಿತವಲ್ಲ, ಎಲ್ಲ ಜಾತಿ, ಸಮುದಾಯದವರಿಗೂ, ಎಲ್ಲ ಪಕ್ಷ, ಎಲ್ಲ ಧರ್ಮಗಳಿಗೆ ನೀಡಲಾಗುತ್ತಿದೆ.