ದೇಶದಲ್ಲಿ ಎಲ್ಲಿದೆ ನೈಜ ಪ್ರಜಾಪ್ರಭುತ್ವ?:ರಾಜರತನ್ ಅಂಬೇಡ್ಕರ್ ಪ್ರಶ್ನೆ
ಕಲಬುರಗಿ:ಜೂ.17: ದೇಶದಲ್ಲಿ ಇಂದಿಗೂ ಪ್ರಜಾಪ್ರಭುತ್ವ ಜಾರಿಯಲ್ಲಿಲ್ಲ. ಬದಲಾಗಿ ಮನುವಾದ ಜೀವಂತವಿದ್ದು, ಎಲ್ಲೆಡೆ ಜಾರಿಯಲ್ಲಿದೆ. ಹಾಗಾಗಿ ಪ್ರಜಾಪ್ರಭುತ್ವ ಜಾರಿಗಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತನ್ ಅಂಬೇಡ್ಕರ್ ಹೇಳಿದರು.
ಜಿಲ್ಲೆಯ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದಲ್ಲಿ ಭಾನುವಾರ ನಡೆದ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಹಾಗೂ ಭಾರತದ ಪ್ರಜಾಪ್ರಭುತ್ವ ಉಳಿಸಿ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಜಾರಿಗಾಗಿ ಜನಾಂದೋಲನ ನಡೆಸಬೇಕಿರುವುದು ಇರಾನ್, ಇರಾಕ್, ಪಾಕಿಸ್ತಾನದಂತಹ ರಾಷ್ಟ್ರಗಳ ವಿರುದ್ದ ಅಲ್ಲ. ನಮ್ಮವರ ವಿರುದ್ಧವೇ ನಾವು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಸಮುದಾಯದ ಜನರ ಒಲೈಕೆಗಾಗಿ ಸಂವಿಧಾನ ಪ್ರತಿಗೆ ನಮಸ್ಕರಿಸುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂವಿಧಾನ ಪ್ರತಿಯನ್ನು ಕಂಕುಳಿನಲ್ಲಿ ಇಟ್ಟುಕೊಂಡು ದೇಶದಾದ್ಯಂತ ಹೋರಾಟ ನಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪಕ್ಷದಿಂದಲೂ ಸಂವಿಧಾನ ರಕ್ಷಣೆಯ ಕೆಲಸ ನಡೆದಿಲ್ಲ. ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲೂ ಸಂವಿಧಾನ ಬಾಹಿರ ಕೃತ್ಯಗಳನ್ನೆ ನಡೆಸಲಾಗಿದೆ. ಗೆದ್ದ ಬಳಿಕ ಈ ಇಬ್ಬರು ಸಂವಿಧಾನ ಆಶಯ ಈಡೇರಿಸುವ ಕೆಲಸವನ್ನೇ ಮಾಡಿಲ್ಲ ಎಂದು ಆಪಾದಿಸಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಒಬ್ಬ ಉದ್ಯಮಿಗಾಗಿ 750 ಶೋಷಿತರ ಮನೆಗಳನ್ನು ನೆಲಸಮ ಮಾಡಿತ್ತು. ಈ ಪ್ರದೇಶದ ಜನರನ್ನು ಪ್ರತಿನಿಧಿಸುತ್ತಿದ್ದ ದಲಿತ ಸಮುದಾಯದ ಕಾಂಗ್ರೆಸ್ ಸಂಸದರು ಇದರ ವಿರುದ್ಧ ಧ್ವನಿ ಎತ್ತಲಿಲ್ಲ. ದೇಶದ 132 ಮೀಸಲು ಕ್ಷೇತ್ರಗಳ ಸಂಸದರು ತಮ್ಮ ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ. ತಮ್ಮ ಗೆದ್ದ ಪಕ್ಷಗಳನ್ನು ಪ್ರತಿನಿಧಿಸುತ್ತಿರುವ ಇಂತಹ ಸಂಸದರಿಂದ ದೇಶದ ಶೋಷಿತ ಜನರ ಹಕ್ಕುಗಳ ರಕ್ಷಣೆ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿಯುವ ನೀರು, ಮಂದಿರ ಪ್ರವೇಶ, ಗ್ರಾಮ ಪಂಚಾಯಿತಿಯಿಂದ ರಾಷ್ಟ್ರಪತಿವರೆಗೂ ಮಹಿಳೆಗೆ ಅವಕಾಶ ಕೊಡಿಸಿದ್ದು ಬಾಬಾ ಸಾಹೇಬರ ಸಂವಿಧಾನ. ಸಂವಿಧಾನ ಆಶಯ ಈಡೇರಿಸಲು ಶೋಷಿತ ಸಮುದಾಯ ಸ್ಥಾಪಿತ ಪಕ್ಷಗಳಿಂದ ಸಾಧ್ಯ. ಅವುಗಳ ಸ್ಥಿತಿ ದೇಶದಲ್ಲಿ ದುರ್ಬಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯುವ ಚಿಂತಕ ಅನಿಲ್ ಟೆಂಗಳಿ ಮಾತನಾಡಿ, ವಿಶ್ವದ 157 ದೇಶಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದರೂ ದೇಶದದ
ಇಡೀ ಜಗತ್ತು ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದರೂ ದೇಶದಲ್ಲಿ ಮಾತ್ರ ಅವರ ಜನ್ಮದಿನ ಆಚರಣೆ ದಲಿತ ಕೇರಿ ಬಿಟ್ಟು ಹೋಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ವಿಧಾನಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ಹಂಚಲಾದ ಒಂದು ಸಾವಿರ ರೂಪಾಯಿ ಅನ್ನು ತೆಗೆದುಕೊಳ್ಳಲು 2 ಲಕ್ಷ ವೇತನ ಪಡೆಯುವ ಪದವಿ ಕಾಲೇಜಿನ ಅಧ್ಯಾಪಕರೊಬ್ಬರು 8 ಲಕ್ಷದ ಕಾರಿನಲ್ಲಿ ಹೋಗಿ ಹಣ ತೆಗೆದುಕೊಂಡಿದ್ದಾರೆ. ಮತದಾನ ಮೌಲ್ಯ ಅರಿವು ಇರದ ಇಂತಹ ಪ್ರಾಧ್ಯಾಪಕರಿಂದ ಹೇಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಭಂತೆ ಬೋಧಿಧಮ್ಮ, ನಗರಪಾಲಿಕೆ ಮಾಜಿ ಸದಸ್ಯ ಸೂರ್ಯಕಾಂತ ನಿಂಬಾಳ್ಕರ್, ಗ್ರಾಮದ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಿವಶರಣಪ್ಪ ಸಜ್ಜನ, ಗ್ರಾಮದ ತರುಣ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಭಾವಿ, ಗ್ರಾ.ಪಂ. ಅಧ್ಯಕ್ಷೆ ಕಸ್ತೂರಬಾಯಿ, ಉಪಾಧ್ಯಕ್ಷ ಶಿವಾನಂದ ರಾಮನ, ಗೋರಖನಾಥ ಸಜ್ಜನ, ಅನಿಲ ಟೆಂಗಳಿ, ಶಶಿಕಾಂತ ವಿಮಲ್ ಹಾಜರಿದ್ದರು.