ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ತಾಳೆ ಹಾಕುವುದು ಸರಿಯಲ್ಲ: ಸಿಎಂ
ವಿಜಯಪುರ,ಜೂ.17: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ತಾಳೆ ಹಾಕುವುದು ಸರಿಯಲ್ಲ. ಚುನಾವಣೆ ಫಲಿತಾಂಶಕ್ಕೂ ಬೆಲೆ ಏರಿಕೆಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ಜಿಲ್ಲೆಯ ಇಂಚಗೇರಿ ಗ್ರಾಮದ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಪ್ರತಿಪಕ್ಷದ ನಾಯಕ ಆರ್. ಅಶೋಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸೇಡಿಗಾಗಿ ಮಾಡಲಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. ಏ. 11, 2021 ರಂದು ಪೆಟ್ರೋಲ್ ಮೇಲೆ ಶೇ. 35 ತೆರಿಗೆ ಹಾಗೂ ಡೀಸೆಲ್ ಮೇಲೆ ಶೇ. 24 ತೆರಿಗೆ ವಿಧಿಸುತ್ತಿದ್ದರು. ನಂತರ ಕೇಂದ್ರದಲ್ಲಿ ಇಳಿಕೆ ಮಾಡಿದ್ದರಿಂದ ಇವರೂ 35 ರಿಂದ 25.92 ಕ್ಕೆ ನಂತರ ಇಳಿಸಿದರು. ಡೀಸಲ್ ಮೇಲೆ 14.34ಕ್ಕೆ ಇಳಿಸಿದರು. ಶೇ.7 ರೂಪಾಯಿಯಷ್ಟು ಕಡಿಮೆ ಮಾಡಿದರು. ಏಕೆಂದರೆ ಕೇರಳ ಆಗಲಿ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಕಡಿಮೆ ಮಾಡಲಿಲ್ಲ. ಈಗ ಕರ್ನಾಟಕದಲ್ಲಿ 99.85 ರೂ. ಪೆಟ್ರೋಲ್ ಬೆಲೆಯಿದೆ. ನಿನ್ನೆಯಿಂದ ಮೂರು ರೂಪಾಯಿ ಹೆಚ್ಚು ಮಾಡಿದ್ದೇವೆ. 102 ರೂ.ಗೆ ಹೆಚ್ಚಾಗಿದೆ. ಇದು ತಮಿಳುನಾಡಿಗೆ ಸಮವಾಗಿದೆ. ಕೇರಳದ ಕಾಸರಗೋಡಿನಲ್ಲಿ 106.66 ರೂ.ಗಳಿದೆ. ಆಂಧ್ರದ ಅನಂತಪುರದಲ್ಲಿ 109.44, ತೆಲಂಗಾಣದ ಹೈದರಾಬಾದ್‍ನಲ್ಲಿ 107.40 ಹಾಗೂ ಮಹಾರಾಷ್ಟ್ರದಲ್ಲಿ 104.46 ರೂ.ಇದೆ. ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ದರ ಕಡಿಮೆ ಇದೆ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಕರ್ನಾಟಕದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ಇಷ್ಟು ದುಬಾರಿಯಾಗಿರಲಿಲ್ಲ ಎಂದು ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹಿಂದೆ ಇದ್ದಾಗ ಶೇ. 35 ಇತ್ತು. ಬಿಜೆಪಿ ಸರ್ಕಾರ ಇರುವ ರಾಜಸ್ಥಾನದಲ್ಲಿ 104.86 ರೂ.ಗಳಿದೆ ಹಾಗೂ ಮಧ್ಯಪ್ರದೇಶದಲ್ಲಿ 106.47 ರೂ. ಗಳಿದೆ. ಕರ್ನಾಟದಲ್ಲಿ ಈ ರಾಜ್ಯಗಳಿಗಿಂತ ಕಡಿಮೆ ಇದೆ ಎಂದರು.
ನಾವು ಸೋತಿದ್ದೇವೆ. ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ವಿಜಯಪುರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ಕರ್ನಾಟಕದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಒಂಭತ್ತು ಸ್ಥಾನಗಳನ್ನು ಗಳಿಸಿದ್ದೇವೆ. ಬಿಜೆಪಿ ಕಳೆದ ಬಾರಿ 25 ಇದ್ದನ್ನು ಈ ಬಾರಿ 19 ಕ್ಕೆ ಇಳಿದಿದ್ದಾರೆ. ನಮಗೆ ಶೇ. 13 ಮತ ಹಂಚಿಕೆಯಾಗಿದೆ. ನಾವು ಸೋತಿದ್ದೇವೆಯೇ ಎಂದು ಪ್ರಶ್ನಿಸಿದರು. ಆದರೆ ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ ಅಷ್ಟೇ ಎಂದರು.
ಚುನಾವಣೆಯಲ್ಲಿ ಸೋತಿರುವುದು ಬಿಜೆಪಿ. ಕಳೆದ ಬಾರಿ 303 ಸ್ಥಾನಗಳನ್ನು ಪಡೆದು ಈ ಬಾರಿ 240 ಸ್ಥಾನಗಳನ್ನು ಪಡೆದು ಬಿಜೆಪಿ ಸೋತಿದೆ. ಕಳೆದ ಬಾರಿ ಶೇ. 31 ಈ ಬಾರಿ ಶೇ. 41 ಮತ ಹಂಚಿಕೆಯಾಗಿದೆ. 15 ಸ್ಥಾನ ಬರಬಹುದೆಂಬ ನಿರೀಕ್ಷೆಯಿತ್ತು. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕಡಿಮೆ ಮತ ಬಂದಿದೆ, ಮೋದಿ ಅಲೆ ಕಡಿಮೆಯಾಗಿದೆ ಎಂದರು.
ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್‍ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿಗಳನ್ನು ಬಡವರ ಅನುಕೂಲಕ್ಕಾಗಿ ಜಾರಿ ಮಾಡಿದೆಯೇ ಹೊರತು ಚುನಾವಣೆಗಾಗಿ ಅಲ್ಲ ಎಂದರು.
ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಇತರರು ಇದ್ದರು.