371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚನೆಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ; ಈಶ್ವರ ಖಂಡ್ರೆ ಭರವಸೆ
ಕಲಬುರಗಿ:ಜೂ.16:ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಹಿರಿಯ ಪರಿಣಿತ ತಜ್ಞರ ನಿಯೋಗ ಇಂದು ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮತ್ತು ಸಮಿತಿಯ ಗೌರವಾನ್ವಿತ ಮುಖಂಡರಾದ ಬಸವರಾಜ ದೇಶಮುಖ ಅವರ ಮುಖಂಡತ್ವದಲ್ಲಿ ಕರ್ನಾಟಕ ರಾಜ್ಯದ ಅರಣ್ಯ ಸಚಿವರು ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕಾ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರರವರನ್ನು ಕಲಬುರಗಿ ಶಾಸಕರಾದ ಅಲ್ಲಂಪ್ರಭು ಪಾಟೀಲ ಅವರ ಉಪಸ್ಥಿತಿಯಲ್ಲಿ ಸಮಿತಿಯ ನಿಯೋಗವು ಭೇಟಿ ಮಾಡಿ ಸುಮಾರು ಒಂದು ಗಂಟೆಗಳ ಕಾಲ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಕ್ಕಿರುವ ಸಂವಿಧಾನದ 371(ಜೆ) ಕಲಂ ರಕ್ಷಣೆಯ ಬಗ್ಗೆ ಮತ್ತು ಇದರ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು, ಪರಿಣಿತರಾದ ಆರ್.ಕೆ. ಹುಡಗಿ , ಡಾ. ಗುಲಶೆಟ್ಟಿ, ಡಾ. ಮಾಜಿದ್ ದಾಗಿ, ಡಾ. ಶರಣಬಸಪ್ಪ ಹತ್ತಿ, ಮನೀಷ್ ಜಾಜು ಅವರುಗಳು ವಿವರವಾಗಿ ಮಾನ್ಯ ಸಚಿವರುಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಮಂತ್ರಿಗಳವರಿಗೆ ಹನ್ನೆರಡು ಬೇಡಿಕೆಗಳ ವಿವರವಾದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಅದರಲ್ಲಿ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಿಕ್ಕಿರುವ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲು ಮತ್ತು ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪಿಸುವುದು ಸೇರಿದಂತೆ ಇನ್ನುಳಿದ ಬೇಡಿಕೆಗಳನ್ನು ಮಂಡಿಸಲಾಯಿತು. ಸಮಿತಿಯ ಮುಖಂಡರುಗಳ ಬೇಡಿಕೆಯ ಬಗ್ಗೆ ಗಂಭೀರವಾಗಿ ಆಲಿಸಿದ ಮಾನ್ಯ ಸಚಿವರು ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಿ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯದ ರಚನೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಅರಣ್ಯ ಸಚಿವರು ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆರವರು ಬಲವಾದ ಭರವಸೆ ನೀಡಿದರು. ಅದರಂತೆ ಸಮಿತಿ ಸಲ್ಲಿಸಿದ ಬೇಡಿಕೆಗಳ ಬಗ್ಗೆ ಸಚಿವರಾದ ದರ್ಶನಾಪೂರ ರವರು ಸಹ ಒತ್ತು ನೀಡಿದರು.
ಬೆಂಗಳೂರಿನ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು, ಹಸಿರು ಪ್ರತಿಷ್ಠಾನ ವೇದಿಕೆಯ ಮುಖಾಂತರ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ 371ನೇ(ಜೇ) ಕಲಮಿನಿಂದ ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ 24 ಜಿಲ್ಲೆಯ ಜನರ ಮನಸ್ಸಿನಲ್ಲಿ ವಿಷಬೀದ ಬಿತ್ತುತ್ತಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದು ಏಕೀಕರಣ ಚಳವಳಿ ಆರಂಭಿಸಿ ರಾಜ್ಯ ಒಡೆಯುವಂತಹ ಹೇಳಿಕೆ ನೀಡುತ್ತಿದ್ದಾರೆ, ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ, ಹಸಿರು ಪ್ರತಿಷ್ಠಾನ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಸಮಿತಿಯ ಮುಖಂಡರು ಒತ್ತಾಯಿಸಿದರು. ಸಚಿವ ಖಂಡ್ರೆರವರು ಇದಕ್ಕೆ ಉತ್ತರಿಸಿ, ನಮಗೆ ಸಿಕ್ಕಿರುವ ಸಂವಿಧಾನಬದ್ಧ ಸ್ಥಾನಮಾನಕ್ಕೆ ಯಾರಿಂದಲೂ ಸಹ ಕೂದಲೆಳೆಯಷ್ಟು ಧಕ್ಕೆ ಮಾಡಲು ಸಾಧ್ಯವಿಲ್ಲ, ನಾವೆಲ್ಲ ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರು ಸಂಘಟಿತವಾಗಿ ಬದ್ಧತೆ ಪ್ರದರ್ಶಿಸುತ್ತೇವೆ, ಕಲ್ಯಾಣ ಕರ್ನಾಟಕದಲ್ಲಿ 37ನೇ(ಜೆ) ಕಲಂ ರಕ್ಷಣೆಯ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ವಿವರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು. ಸಚಿವರಾದ ಶರಣಪ್ಪ ದರ್ಶನಾಪೂರ ಅವರು ಮಾತನಾಡಿ ನಮ್ಮ ಪ್ರದೇಶಕ್ಕೆ ಸಿಕ್ಕಿರುವ ಸಂವಿಧಾನಬದ್ಧ ಸ್ಥಾನಮಾನದಿಂದ ಯಾವ ಜಿಲ್ಲೆಗೂ ಅನ್ಯಾಯವಾಗುತ್ತಿಲ್ಲ ನಮ್ಮ ಪಾಲು ನಮಗೆ ಸಿಗುತ್ತಿದೆ. ಬೆಂಗಳೂರಿನ ಕೆಲವು ಪಟ್ಟಭದ್ರ ಶಕ್ತಿಗಳು ಸುಳ್ಳು ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಸರಕಾರ ಇಂತಹ ಸುಳ್ಳು ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳುವದಿಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಸ್ಲಂ ಚೌಂಗೆ, ಮಲ್ಲಿನಾಥ ಸಂಗಶೆಟ್ಟಿ, ಬಿ.ಬಿ. ನಾಯಕ, ರಮೇಶ ಚವ್ಹಾಣ, ಎಂ.ಬಿ. ನಿಂಗಪ್ಪ, ಡಾ. ಮಂಜೂರ ಡೆಕ್ಕನಿ, ಸುಭಾಶ ಶೀಲವಂತ, ಶರಣಬಸಪ್ಪ ಕುರಿಕೋಟಾ, ಅಬ್ದುಲ ರಹೀಂ, ಸಂಜೀವಕುಮಾರ, ರಾಜು ಜೈನ್, ಶಾಂತಪ್ಪ ಕಾರಭಾಸಗಿ, ಸಂಧ್ಯಾರಾಜ ಸ್ಯಾಮ್ಯೂವೆಲ್, ಆನಂದ ದೇಶಪಾಂಡೆ,ಎಚ್. ಮಹೀಬೂಬ, ಅನೀಲ, ಆರ್.ಜೆ. ಮಹೀಬೂಬ, ವಿನೋದಕುಮಾರ ಸೇರಿದಂತೆ ಅನೇಕ ಪರಿಣಿತರು ಉಪಸ್ಥಿತರಿದ್ದರು.