ಬೊಮ್ಮಘಟ್ಟ ಗ್ರಾಮದಲ್ಲಿ ಮಳೆ – ಬೆಳೆಗಾಗಿದೇವಿಗೆ ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಸಂಡೂರು: ಜು: 16: ತಾಲೂಕಿನ ಬೊಮ್ಮಘಟ್ಟ ಗ್ರಾಮದಲ್ಲಿ ಪ್ರತಿ ಮನೆಯಲ್ಲಿಯೂ ಸಹ ಭಕ್ತರ ಸಂಭ್ರಮ ಹಾಗೂ ಉಪವಾಸದ ಆಚರಣೆಯ ಮೂಲಕ ಹೋಳಿಗೆಮ್ಮ ದೇವಿಯ ಅರಾಧನೆಯನ್ನು ಗ್ರಾಮದ ಎಲ್ಲಾ ಮನೆಯಲ್ಲಿ ನೆರವೇರಿಸಲಾಯಿತು.
ಗ್ರಾಮದ ಒಳಿತಿಗಾಗಿ, ಮಳೆ, ಬೆಳೆ, ಸಮೃದ್ಧವಾಗಿರಲಿ ಎಂದು ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮದ ಜನತೆ ಒಂದು ವಾರದ ಪೂರ್ವದಲ್ಲಿಯೇ ಇಡೀ ಗ್ರಾಮದಲ್ಲಿ ಡಂಗೂರವನ್ನು ಸಾರುವ ಮೂಲಕ ಶುಕ್ರವಾರದಂದು ಯಾರೂ ಸಹ ಬುತ್ತಿಯನ್ನು ಕಟ್ಟಬಾರದು, ಗ್ರಾಮದಲ್ಲಿ ಹೋಳಿಗಮ್ಮ ದೇವಿಯ ಪೂಜೆಯನ್ನು ನಡೆಸಲಾಗುವುದು ಎಂದು ಸಾರಿರುತ್ತಾರೆ, ಅದರಂತೆ ಶುಕ್ರವಾದ ದಿನದಂದು ಬೆಳಗಿನಿಂದಲೇ ಭಕ್ತರು ಸಿದ್ದತೆಯನ್ನು ಮಾಡಿಕೊಳ್ಳುತ್ತಾರೆ, ಅದರಲ್ಲೂ ಪ್ರಮುಖವಾಗಿ ಮನೆಯಲ್ಲಿ ಹೋಳಿಗೆ( ಹೊಬ್ಬಟ್ಟು) ತಯಾರಿಸುವ ಗೃಹಿಣಿಯರು ಮಡಿಯಿಂದ, ಕೆಲವರು ಉಪವಾಸದ ವೃತದಿಂದ ಹೋಳಿಗೆಯನ್ನು ಸಿದ್ದಪಡಿಸುತ್ತಾರೆ, ಸಂಜೆ ಸರಿಯಾಗಿ 5 ಗಂಟೆ ಸುಮಾರಿಗೆ ಪ್ರತಿ ಮನೆಯಿಂದ ದೇವಿಗೆ ಅರ್ಪಿಸಲು ಮನೆಯಿಂದ ವಿಶೇಷ ಎಲೆಯಲ್ಲಿ ಹೋಳಿಗೆ, ಬೇವಿನ ಎಲೆ, ಬಳೆ, ಅಡಿಕೆ ಎಲೆ, ದಕ್ಷಿಣೆಯನ್ನು ಪ್ರತಿ ಮನೆಯಿಂದಲೂ ಸಹ ತೆಗೆದುಕೊಂಡು ಊರ ಹೊರಭಾಗದಲ್ಲಿ ನಿಗದಿ ಪಡಿಸಿದ ಬೇವಿನ ಮರದ ಹತ್ತಿರದಲ್ಲಿ ಹೋಳಿಗೆ ಅಮ್ಮನನ್ನು ಪ್ರತಿಷ್ಠಾಪಿಸಿರುತ್ತಾರೆ ಅಲ್ಲಿಗೆ ಎಲ್ಲಾ ಮನೆಯಿಂದಲೂ ಸಹ ಹೋಳಿಗೆಯ ಎಡೆ ಬಂದು ಅರ್ಪಿಸಿ ಸಾಗುತ್ತಾರೆ.
ನೇವೈದ್ಯ ಸಮರ್ಪಿಸಿದ ತಕ್ಷಣ ಮನೆಗೆ ತೆರಳಿದ ಭಕ್ತರು ಮನೆಯಲ್ಲಿ ದೇವರಿಗೆ ಅರ್ಪಿಸಿ ಉಪವಾಸ ವೃತವನ್ನು ಬಿಡುತ್ತಾರೆ, ಪ್ರಮುಖವಾದಿ ಗ್ರಾಮದ ಹಿತಕ್ಕಾಗಿ, ದನಕರುಗಳು ಸುಖವಾಗಿರಲೆಂದು, ರೈತರು ಉತ್ತಮ ಮಳೆ ಬಂದು ಬೆಳೆಯಲಿ ಎಂದು ಪ್ರಾರ್ಥಿಸುತ್ತಾರೆ.