ಪರಿಸರವನ್ನು ನಾಶ ಅಧ:ಪತನಕ್ಕೆ ಕಾರಣವಾಗಲಿದೆ- ಪಿ.ಎಸ್.ಐ
ಸಂಜೆವಾಣಿ ವಾರ್ತೆ
ಸಂಡೂರು: ಜು: 16: ಸಂಡೂರು: ಮನೆಗೊಂದು ಮಗು ಹೇಗೆ ಮುಖ್ಯವೋ ಹಾಗೆ ಮಗುವಿಗೆ ಒಂದು ಮರವೂ ಸಹ ಬಹು ಮುಖ್ಯವಾದುದು, ಇಂದು ಮನುಷ್ಯನ ಅತಿಯಾದ ಅಸೆಯಿಂದ, ಪ್ರಗತಿಯ ಹೆಸರಿನಲ್ಲಿ, ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುವ ನಾವು ಪರಿಸರವನ್ನು ನಾಶಮಾಡುವ ಮೂಲಕ ಅಧ:ಪತನಕ್ಕೆ ಹೋಗುತ್ತಿದ್ದೇವೆ ಅದ್ದರಿಂದ ಪ್ರತಿಯೊಬ್ಬರೂ ಸಹ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸುವುದರ ಜೊತೆಗೆ ರಕ್ಷಿಸುವಂತಹ ಮಹತ್ತರ ಕಾರ್ಯವನ್ನು ಮಾಡಬೇಕು ಎಂದು ಚೋರುನುರು ಠಾಣೆಯ ಪಿ.ಎಸ್.ಐ. ರೇವಣಸಿದ್ದಯ್ಯ ಕರೆನೀಡಿದರು.
ಅವರು ತಾಲೂಕಿನ ಚೋರನೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಟ್ರಸ್ಟ್ , ಸ್ವ ಸಹಾಯ ಗುಂಪುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆಯನ್ನು ಪೋಲಿಸ್ ಠಾಣೆಯಲ್ಲಿ ಗಿಡ ನೆಡುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿ ಇಂದು ನಾವು ಬಹಳಷ್ಟು ಸಂದರ್ಭದಲ್ಲಿ ಹೇಳುತ್ತೇವೆ ಪರಿಸರ ಉಳಿಸಿ ಬೆಳೆಸಿ ಎಂದು ಅದರೆ ನಿಜ ಅರ್ಥದಲ್ಲಿ ಮಾಡದೇ ಇರುವುದು ಖೇದಕರ ಸಂಗತಿ, ಇಂದು ದೆಹಲಿಯಂತ ಪ್ರದೇಶದಲ್ಲಿ ಉಂಟಾಗಿರುವ ಸಮಸ್ಯೆ ನಮಗೂ ಬರಬಹುದು ಅದ್ದರಿಂದ ಪರಿಸರ ರಕ್ಷಣೆ, ಉಳಿಸುವ ಕಾರ್ಯ ಇಂದಿನಿಂದಲೇ ಮಾಡೋಣ ಎಂದರು.
ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ರೋಹಿತಾಕ್ಷ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ವರ್ಷ ಬೇಸಿಗೆಯಲ್ಲಿ ಅನುಭವಿಸಿದಂತಹ ತಾಪ ಪ್ರಭಾವ ನಮಗೆಲ್ಲ ಅರಿವಾಗಿರಬಹುದು, ಕಾರಣ ಪರಿಸರದ ನಾಶವೇ ಕಾರಣ ಎಂಬುದನ್ನು ತಿಳಿಯಬೇಕು, ಒಂದು ವೇಳೆ ಇದೇ ರೀತಿ ಪರಿಸರ ನಾಶ ಮುಂದುವರೆದರೆ ತಾಪಮಾನ ಹೆಚ್ಚಾಗಿ ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗಿ ಮನುಷ್ಯನ ಬದುಕು ದುಸ್ಥರವಾಗುತ್ತದೆ, ಅದ್ದರಿಂದ ಗಿಡ ನೆಡೆವ ಮೂಲಕ ಪರಿಸರ ರಕ್ಷಿಸೋಣ ಇದಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ನಿರಂತರ ಬೆಂಬಲಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ್ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಹೆಚ್. ಎಂ.ಮಂಜುನಾಥ ಅವರು ಮಾತನಾಡಿ ಗಿಡ ನೆಡಿ ವನಬೆಳೆಸಿ, ಪ್ರತಿ ಜಮೀನಿನಲ್ಲಿ ಬದುವಿನಲ್ಲಿ ಗಿಡ ಬೆಳೆಸುವುದರಿಂದ ಭೂಮಿ ಫಲವತ್ತತೆ ಹೆಚ್ಚುತ್ತದೆ, ಭೂ ಸವೆತ ನಿಲ್ಲುತ್ತದೆ ಉತ್ತಮ ಇಳುವರಿ ಬರುತ್ತದೆ, ಆಮ್ಲಜನಕ ಹೆಚ್ಚಾಗುತ್ತದೆ ಎಂದರು.
ಗ್ರಾಮದ ಗಣ್ಯರಾದ ದಳಪತಿ ವೆಂಕಟೇಶ್ ಅವರು ಮಾತನಾಡಿ ನಾವು ಪರಿಸರ ರಕ್ಷಣೆ ಬಿಟ್ಟು ಅದನ್ನು ನಾಶಮಾಡುವ ಎಲ್ಲಾ ಕಾರ್ಯ ಮಾಡುತ್ತಿದ್ದೇವೆ, ಅದರಲ್ಲೂ ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುತ್ತಿದೆ ಅದ್ದರಿಂದ ಅದನ್ನು ನಿಲ್ಲಿಸಿ ಪರಿಸರ ರಕ್ಷಿಸೋಣ ಎಂದರು.
ಸಮಾರಂಭದಲ್ಲಿ ತಾಲೂಕು ಯೋಜನಾಧಿಕಾರಿ ಶುಭಾದೇವಿ, ವಲಯದ ಮೇಲ್ವಿಚಾರಕರಾದ ಶಾಂತಲಾ, ಪ್ರಗತಿಬಂಧು ಸ್ವ ಸಹಾಯ ಸಂಘದ ಸದಸ್ಯರು ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.