ಜಾಗೃತಿ ವಹಿಸಿ ಕುಡಿಯುವ ನೀರು ಸರಬರಾಜು ಮಾಡಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೬; ಚಿತ್ರದುರ್ಗ ತಾಲ್ಲೂಕಿನ ಎಲ್ಲಾ 38 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿಗಳು ನೀರುಗಂಟಿಗಳಿಂದ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಜಾಗೃತಿ ವಹಿಸಿ ಸ್ವಚ್ಛತೆ ಮೂಲಕ ನೀರು ಸರಬರಾಜು ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಹನುಮಂತಪ್ಪ ಸೂಚನೆ ನೀಡಿದರು.ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಗ್ರೇಡ್-2, ಗ್ರೇಡ್-1, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕರವಸೂಲಿಗಾರ ಮತ್ತು ನೀರುಗಂಟಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈಗಾಗಲೇ ಮುಂಗಾರು ಪ್ರಾರಂಭವಾಗಿರುವುದರಿಂದ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಟ್ಯಾಂಕ್‍ಗಳನ್ನು ಸ್ವಚ್ಛತೆ ಮಾಡುವುದು ಮತ್ತು ಪೈಪ್‍ಲೈನ್‍ಗಳ ದುರಸ್ಥಿ ಮಾಡುವುದು, ಚರಂಡಿಗಳನ್ನು ಕ್ಲೀನಿಂಗ್ ಮಾಡುವುದು ಸೇರಿದಂತೆ ಪ್ರತಿ ತಿಂಗಳಿಗೊಮ್ಮೆ ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.  ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಹೆಚ್.ಯರ್ರಿಸ್ವಾಮಿ, ರೂಪಾಕುಮಾರಿ, ಯೋಜನಾ ನಿರ್ದೇಶಕ ರಾಘವೇಂದ್ರ, ವ್ಯವಸ್ಥಾಪಕ ತಿಪ್ಪೇಸ್ವಾಮಿ  ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಗ್ರೇಡ್-2, ಗ್ರೇಡ್-1, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕರವಸೂಲಿಗಾರ ಮತ್ತು ನೀರುಗಂಟಿಗಳು ಇದ್ದರು.