ಕೂಡ್ಲಿಗಿ ತಾಲೂಕಿನಲ್ಲಿ ಸುರಿದ ಮಳೆ -ಕೆರೆಗಳಿಗೆ ನೀರು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.16 :- ಪಟ್ಟಣ ಸೇರಿದಂತೆ ತಾಲೂಕುವರು ಮೂರ್ನಾಕು ದಿನದಿಂದ ಸುರಿದ ಮಳೆರಾಯನ ಆರ್ಭಟದಲ್ಲಿ ಗೋಕಟ್ಟೆಗಳು ತುಂಬಿ ಕೆರೆಗಳತ್ತ ಹರಿಯುತ್ತಿವೆ ಮತ್ತು ಗುಡೇಕೋಟೆ, ಕೂಡ್ಲಿಗಿ ವ್ಯಾಪ್ತಿಯಲ್ಲಿ ಮನೆಗಳ ಮೇಲ್ಚಾವಣಿ ಹಾಗೂ ಗೋಡೆ ಕುಸಿತದಿಂದ ಮನೆಗಳು ಹಾನಿಯಾಗಿವೆ ಎನ್ನುವ ವರದಿ ಲಭ್ಯವಾಗಿದೆ.
ಬರಗಾಲದಿಂದ ತತ್ತರಿಸಿದ ಕೂಡ್ಲಿಗಿ ತಾಲೂಕಿನ ಜನತೆಗೆ ಸತತ ಮೂರ್ನಾಕು ದಿನದಿಂದ ನಿರಂತರವಾಗಿ ಸುರಿದ ಮಳೆಯಿಂದ ತಾಲೂಕುವರು ರೈತರ ಮುಖದಲ್ಲಿ ಸಂತಸ ಮನೆಮಾಡಿದ್ದರೆ ಇತ್ತ ಕುಸಿದ ಬೋರ್ವೆಲ್ ಗಳ  ಅಂತರ್ಜಲ ಮಟ್ಟ ಮತ್ತೆ ಪಿಕಪ್ ಆಗುತ್ತಿವೆ ತಾಲೂಕಿನ ಗೋಕಟ್ಟೆಗಳು ತುಂಬಿಹರಿಯುತ್ತಿದ್ದು, ಸಣ್ಣಕೆರೆಕಟ್ಟೆಗಳು ತುಂಬುವ ಹಂತಕ್ಕೆ ತಲುಪಿವೆ ದೊಡ್ಡ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ಜಾನುವಾರುಗಳಿಗೂ ನೀರಿನ ಅಭಾವವಿಲ್ಲದೆ ರೈತರು ಹೊಲದ ಕಡೆ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲೂಕಿನ ಗುಡೇಕೋಟೆ ಹೋಬಳಿಯ ಗುಡೇಕೋಟೆ, ರಾಮದುರ್ಗ ಕೆರೆಗಳು ತುಂಬುವ ಹಂತಕ್ಕೆ ಬಂದಿದ್ದು ಒಂದೆರಡು ಮಳೆಗೆ ತುಂಬುವ ಬಹುತೇಕ ಲಕ್ಷಣಗಳು ಕಾಣುತ್ತಿವೆ ಅಲ್ಲದೆ ತಾಲೂಕಿನ ದೊಡ್ಡ ಕೆರೆಯಾದ ಗಂಡಬೊಮ್ಮನಹಳ್ಳಿ ಕೆರೆಗೆ ನೀರು ಹರಿಯುತ್ತಿದ್ದು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದೆ ಅದರಂತೆ ಕೂಡ್ಲಿಗಿ ಪಟ್ಟಣದ ಹೊರವಲಯದ ಕೆರೆ ದೊಡ್ಡಕೆರೆಯಾಗಿದ್ದು ಕಾಲು ಭಾಗದಷ್ಟು ನೀರು ಹರಿದು ಬಂದಿವೆ ಎನ್ನಬಹುದಾಗಿದೆ.
ಮಳೆ ಸುರಿದ ಪರಿಣಾಮ ಗುಡೇಕೋಟೆ ಹೋಬಳಿಯ ನಾಲ್ಕು ಕಡೆ ಅಂದರೆ  ರಾಮದುರ್ಗದ ಸುರೇಶ ಅವರ ಮೇಲ್ಚಾವಣಿ ಮತ್ತು ಹಿರಿಯಮ್ಮ ಎಂಬುವವರ ಮನೆ ಗೋಡೆ ಕುಸಿದು ಹಾನಿಯಾಗಿದ್ದು ಚಂದ್ರಶೇಖರಪುರದ ಶರಣಪ್ಪ ಅವರ ಮನೆ ಗೋಡೆ ಕುಸಿದಿದೆ, ಸಿಡೆಗಲ್ಲು ಗ್ರಾಮದ ಪಾಲಮ್ಮ ಅವರ ಮನೆಗೋಡೆ ಕುಸಿದಿದೆ. ಕಕ್ಕುಪ್ಪಿ ಗ್ರಾಮದಲ್ಲಿ ಶರಣಮ್ಮ ಅವರ ಮನೆಯೊಳಗೆ ನೀರು ನುಗ್ಗಿ ದವಸ ದಾನ್ಯಗಳು ಹಾನಿಯಾಗಿವೆ ಅಲ್ಲದೆ ಇಂದು ಬೆಳಿಗ್ಗೆ ಪಟ್ಟಣದ ಅಜಾದ್ ನಗರದ ರೋಷನ್ ಮಿನುಲ್ಲಾ ಅವರ ಮನೆಯ ಮೇಲ್ಚಾವಣಿ ಕುಸಿದಿದೆ. ತಾಲೂಕಿನಲ್ಲಿ ಮನೆಗಳ ಹಾನಿಯಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.