ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಅನನ್ಯ
ಕಲಬುರಗಿ:ಜೂ.16: ತಂದೆಯ ತ್ಯಾಗ, ಪ್ರೀತಿ, ಪ್ರೇಮ ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನತನವನ್ನು ತೊರೆದು, ಎಲ್ಲವೂ ಮಕ್ಕಳಿಗಾಗಿ ದಾರೆಯೆರೆಯುವ ಮೂಲಕ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿ ತಂದೆಯಾಗಿದ್ದಾನೆ. ಇಡೀ ತನ್ನ ಜೀವನದುದ್ದಕ್ಕೂ ಕುಟುಂಬದ ಲೇಸನ್ನೇ ಬಯಸುವ ಮೂಲಕ ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಅನನ್ಯವಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಅಭಿಮತಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ‘ವಿಶ್ವ ಅಪ್ಪಂದಿರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತನಗಾಗಿ ಏನನ್ನು ಪ್ರಾರ್ಥಿಸದ ತಾಯಿ, ತನಗಾಗಿ ಏನನ್ನು ಮಾಡದ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.
ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಮಕ್ಕಳಿಗೆ ಉತ್ತಮವಾದ ಶಿಕ್ಷಣ, ಸಂಸ್ಕಾರ, ಮೌಲ್ಯಗಳು, ನೀಡಿ, ಜೋಪಾನ ಮಾಡಿ ಮಗುವನ್ನು ದೊಡ್ಡವನನ್ನಾಗಿ ಮಾಡುವಲ್ಲಿ ತಂದೆಯ ಪಾತ್ರ ಮರೆಯುವಂತಿಲ್ಲ. ಆತನ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಮಕ್ಕಳು ಎಂದಿಗೂ ಮಾಡಬಾರದು. ತಾಯಿ-ತಂದೆಗೆ ಸಮಾನವಾದ ಗೌರವ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕರಾದ ಶಿಕ್ಷಕರಾದ ಪೂರ್ಣಿಮಾ ಪಾಟೀಲ, ಪ್ರಿಯಾಂಕಾ ಪಿ.ಕೆ, ಶಿಲ್ಪಾ ಎಸ್.ಕೆ, ರೋಹಿತ್, ವರ್ಷಿಣಿ, ಪ್ರೀತಿ ಜೆ.ಬಿ, ಕಾಶಮ್ಮ ಎಸ್.ಚಿನಮ್ಮಳ್ಳಿ, ಸೇವಕಿ ಸುನಿತಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.