ರಸ್ತೆ ಅಪಘಾತ: ಅಪ್ರಾಪ್ತನಿಗೆ ವಾಹನ ಚಲಾಯಿಸಲು ನೀಡಿದ ಆರೋಪಿಗೆ 25 ಸಾವಿರ ರೂ.ದಂಡ
ಕಲಬುರಗಿ,ಜೂ.16-ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನ ಚಲಾಯಿಸಲು ನೀಡಿ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಗಾಯಗೊಳ್ಳಲು ಕಾರಣನಾದ ಆರೋಪಿಗೆ ಇಲ್ಲಿನ 1ನೇ ಜೆಎಂಎಫ್‍ಸಿ ನ್ಯಾಯಾಲಯ 25 ಸಾವಿರ ರೂ.ದಂಡ ವಿಧಿಸಿದೆ.
ನಗರದ ಲಾಹೋಟಿ ಪೆಟ್ರೋಲ್ ಪಂಪ್ ಕಡೆಯಿಂದ ಪಿಡಿಎ ಕಾಲೇಜು ಹೋಗುವ ರಸ್ತೆಯಲ್ಲಿರುವ ವಿ-ಕೇರ್ ಮಕ್ಕಳ ಆಸ್ಪತ್ರೆಯ ಎದರುಗಡೆಯ ರಸ್ತೆಯಲ್ಲಿ ಎರಡು ಬೈಕ್‍ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರೊಬ್ಬರು ಗಾಯಗೊಂಡಿದ್ದರು. ಅಪ್ರಾಪ್ತ ವಯಸ್ಸಿನ ಮಹ್ಮದ್ ಫೈಜಾನ್‍ಗೆ ವಾಹನ ಚಲಾಯಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಆರೋಪಿ ಅಬ್ದುಲ್ ನಫೀಯಾನ್ ವಿರುದ್ಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂಚಾರಿ ಪೊಲೀಸ್ ಠಾಣೆ-1ರ ಪಿಎಸ್‍ಐ ದಶರಥ ಮತ್ತು ಮುಖ್ಯಪೇದೆ ಸೈಯದ್ ರಿಜ್ವಾನ್ ಅವರು ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ದೇಶಮುಖ ಶಿವಕುಮಾರ ಅವರು ಆರೋಪಿ ಅಬ್ದುಲ್ ನಫೀಯಾನ್‍ಗೆ 25 ಸಾವಿರ ರೂ.ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಿನಾಯಕ ಎಸ್.ಕೋಡ್ಲಾ ವಾದ ಮಂಡಿಸಿದ್ದರು.