ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಸಂಗಮೇಶ ಆಯ್ಕೆ
ವಿಜಯಪುರ,ಜೂ.16:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಧಾರವಾಡಲ್ಲಿ ಇರುವ ಬಾಲ ವಿಕಾಸ ಅಕಾಡೆಮಿಗೆ ವಿಜಯಪುರ ಜಿಲ್ಲೆಯ ಯುವ ಮುಖಂಡ ಸಂಗಮೇಶ ಬಬಲೇಶ್ವರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರದ ಕ್ರಮಕ್ಕೆ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೋರಾಟದ ಬದುಕನ್ನು ರೂಪಿಸಿಕೊಂಡ ಸಂಗಮೇಶ ಬಬಲೇಶ್ವರ ಪ್ರಾಥಮಿಕ ಶಾಲೆ ವಿದ್ಯಾರ್ಥಿಯಾಗಿದ್ದಾಗ ನಮ್ಮ ಅಂದರೆ ಎಕ್ಸಲಂಟ್ ಕೋಚಿಂಗ್ ಸೆಂಟರ್‍ನಲ್ಲಿ ಅಧ್ಯಯನ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಮುಂದೆ ಧಾರವಾಡದಲ್ಲಿ ಕಾನೂನು ಪದವಿ ಮುಗಿಸಿಕೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರ ಶ್ರಮಿಸಿದವರು. ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಜಿಲ್ಲೆಯ ಉತ್ಕøಷ್ಟ ಶೈಕ್ಷಣಿಕ ಬರವನ್ನು ಹಿಂಗಿಸಿದ್ದಾರೆ. ಅಮ್ಮನ ಮಡಿಲು ಚಾರಿಟೇಬಲ್ ಮೂಲಕ ಅಸಹಾಯಕ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಓದಿಸುತ್ತಿದ್ದಾರೆ. ಪುಸ್ತಕ ಜೋಳಿಗೆ ಅಭಿಯಾನದ ಮೂಲಕ ದಾನಿಗಳಿಂದ ಗ್ರಂಥಗಳನ್ನು ಪಡೆದು ಗ್ರಾಮೀಣ ವಲಯದ ಸರ್ಕಾರಿ ಶಾಲೆಗಳಿಗೆ ಅರ್ಪಿಸಿದ್ದಾರೆ. ಭವ್ಯ ಭಾರತದ ಶಿಲ್ಪಿಗಳಾದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತವರು. ಹೀಗಾಗಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಅಕಾಡೆಮಿ ಅವರ ನೂತನ ಅಧ್ಯಕ್ಷತೆಯಲ್ಲಿ, ಮಕ್ಕಳ ಮೇಲೆ ಅಪಾರ ಪ್ರೀತಿ ಹಾಗೂ ಭರವಸೆ ಇಟ್ಟಿರುವ ಅವರ ಹೃದಯದ ಆರೈಕೆಯಲ್ಲಿ ಮನುಕುಲ ತೋಟದ ಮೊಗ್ಗುಗಳು ಹೂವುಗಳಾಗಿ ಅರಳುವುದರಲ್ಲಿ ಸಂದೇಹವಿಲ್ಲ ಎಂದು ಬಣ್ಣಿಸಿದ್ದಾರೆ.
ಕಲೆ, ಸಾಹಿತ್ಯ ಸಂಸ್ಕøತಿ, ಪರಿಸರ, ಶೈಕ್ಷಣಿಕ, ಸಾಮಾಜೋಧಾರ್ಮಿಕ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ನಾಡ ಸೇವೆಗೈಯ್ಯುತ್ತಿರುವ ಬಬಲೇಶ್ವರ ಅವರಿಗೆ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸ್ಥಾನ ಲಭಿಸಿರುವುದು ಮಕ್ಕಳ ಸಾಹಿತಿಗಳ ತವರೂರಾದ ವಿಜಯಪುರ ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ಬಸವರಾಜ ಕೌಲಗಿ ಅವರು ಸಂತಸ ಹಂಚಿಕೊಂಡಿದ್ದಾರೆ.