ಪ್ರೀತಿ ಮತ್ತು ರಕ್ಷಣೆಯ ಮೂರ್ತಿ ಅಪ್ಪ:ಸಂತೋಷ ಬಂಡೆ
ವಿಜಯಪುರ,ಜೂ.16: ತಂದೆಯು ಕುಟುಂಬದ ಬೆನ್ನೆಲುಬು. ಮಕ್ಕಳ ಆಸೆ, ಆಕಾಂಕ್ಷೆಗಳಿಗಾಗಿ ತನ್ನ ಸರ್ವಸ್ವವನ್ನು ಧಾರೆ ಎರೆದು, ಅವರ ಅಗತ್ಯತೆ, ಆಸೆಗಳನ್ನು ಪೂರೈಸುತ್ತ, ಸಂಸಾರವನ್ನು ಸಮನಾಗಿ ತೂಗಿಸಿಕೊಂಡು ಸಾಗುವ ಅಪ್ಪನ ಮಾರ್ಗದರ್ಶನ ಜೀವನಕ್ಕೆ ಬಹುಮುಖ್ಯ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಮ್ಮಿಕೊಂಡ ‘ವಿಶ್ವ ಅಪ್ಪಂದಿರ ದಿನ’ವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ, ಪರಿಸರ, ಸಂಸ್ಕಾರ ನೀಡಿ, ಸಮಾಜದ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಅಪ್ಪನ ಪಾತ್ರ ಬಲು ದೊಡ್ಡದು. ತಂದೆಯು ಮಕ್ಕಳಲ್ಲಿ ಜೀವನದ ಶಿಸ್ತು, ನ್ಯಾಯಯುತ ಬದುಕು, ಕರ್ತವ್ಯ ಪ್ರಜ್ಞೆ ರೂಢಿಸುವ ರೀತಿ ಅಮೋಘವಾದುದು ಎಂದು ಹೇಳುತ್ತಾ, ಅಪ್ಪನು ಕುಟುಂಬದ ಅವಿಭಾಜ್ಯ ಅಂಗವಾಗಿದ್ದು, ಮಕ್ಕಳ ಪಾಲಿಗೆ ಗುರುವಾಗಿ, ಉತ್ತಮ ಸ್ನೇಹಿತನಾಗಿ, ಬಂಧುವಾಗಿ ಅವರ ಬದುಕನ್ನು ಹಸನಾಗಿಸುತ್ತಾನೆ. ಅಪ್ಪ ಸದಾ ಕುಟುಂಬದ ರಕ್ಷಕನಾಗಿರುತ್ತಾನೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನ ನಾಗಠಾಣ ಶಾಖೆಯ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ ಮಾತನಾಡಿ, ತಂದೆ ಎಂದರೆ ಜೀವನದ ಪರಿಪೂರ್ಣ ಶಕ್ತಿ. ತಾಯಿ ಜ್ಞಾನ ಕಲಿಸಿದರೆ, ತಂದೆ ಜೀವನದ ಮೌಲ್ಯ,ರೀತಿ-ನೀತಿಗಳನ್ನು ಕಲಿಸುತ್ತಾರೆ. ತನ್ನೆಲ್ಲ ಚಿಕ್ಕ ಚಿಕ್ಕ ಆಸೆಗಳನ್ನು ತ್ಯಾಗ ಮಾಡಿ ಮಕ್ಕಳನ್ನು ಬೆಳೆಸುವ ಅಪ್ಪ ಜಗತ್ತಿನ ಶ್ರೇಷ್ಠ ವ್ಯಕ್ತಿ ಎಂದು ಹೇಳಿದರು.
ಹಿರಿಯರಾದ ಬ್ರಹ್ಮಾನಂದ ಬಂಡೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಗ್ರಾಮಸ್ಥರಾದ ರಾಮಗೊಂಡ ಕತ್ನಳ್ಳಿ, ಶ್ರೀಶೈಲ ರಾಂಪೂರ, ಶಿವಯೋಗಿ ಡೋಮನಾಳ,ಸುರೇಖಾ ಬಂಡೆ, ಶ್ರೀಶೈಲ ಬಗಲಿ, ಮಲ್ಲು ಸಮಗೊಂಡ, ಉಮೇಶ ಕತ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಾದ ಅನುಶ್ರೀ-ಶ್ರೀನಿಧಿ ತಮ್ಮ ತಂದೆಗೆ ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು.