ಕುದಿಸಿ ಆರಿಸಿದ ಶುದ್ಧ ನೀರನ್ನು ಕುಡಿಯಬೇಕು: ಸಂಜೀವ ಕುಮಾರ ದಾಸರ
ಅಫಜಲಪುರ: ಜೂ.16:ಮಳೆಯಿಂದ ಹರಿದು ಬರುವ ಕಲುಷಿತ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರಿ ಕಾಲರಾ, ಟೈಫಾಯಿಡ್, ಕಾಮಾಲೆ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮಳೆಗಾಲ ಮುಗಿಯುವವರೆಗೂ ಕುದಿಸಿ ಆರಿಸಿದ ಶುದ್ಧ ನೀರನ್ನು ಕುಡಿಯಲು ಪ್ರಥಮ ಆದ್ಯತೆ ನೀಡಬೇಕೆಂದು ತಹಸೀಲ್ದಾರ ಸಂಜೀವಕುಮಾರ ದಾಸರ ತಿಳಿಸಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಮಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಎಂ.ಆರ್ ಎಲಿಮಿನೇಷನ್ ಹಾಗೂ ಆರ್.ಬಿ.ಎಸ್.ಕೆ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ತಹಸೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಗ್ರಾಮಗಳಲ್ಲಿನ ಕುಡಿಯುವ ನೀರಿನ ಮೂಲಗಳು ಹಾಗು ಶಾಲಾ-ಕಾಲೇಜು, ಅಂಗನವಾಡಿ, ಹಾಸ್ಟೆಲ್ಗಳಲ್ಲಿನ ಕುಡಿಯುವ ನೀರಿನ ಮೂಲಗಳ ಸುತ್ತಲೂ ಸ್ವಚ್ಛತೆ ಕಾಪಾಡುವುದು ಹಾಗೂ ಎಲ್ಲಾ ಕುಡಿಯುವ ನೀರನ್ನು ಬ್ಲೀಚಿಂಗ್ ಪೌಡರದಿಂದ ಶುದ್ಧೀಕರಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಲು ಮತ್ತು ಶಾಲಾ ಮಕ್ಕಳಿಗೆ ಬಿಸಿ ಊಟಕ್ಕಿಂತ ಮುಂಚೆ ಸಾಬೂನಿನಿಂದ ಕೈ ತೊಳೆದುಕೊಂಡು ಊಟ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಟಿಹೆಚ್.ಓ ಡಾ.ರವಿಕುಮಾರ ಬಿರಾದಾರ ಅವರು ಮಾತನಾಡಿ ಆರೋಗ್ಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜುಗಳ ಮಕ್ಕಳಿಗೆ ಕಲುಷಿತ ನೀರು ಕುಡಿಯುವುದರಿಂದ ಉಂಟಾಗುವ ರೋಗಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ ಹಾಗೂ ಸಮರೋಪಾದಿಯಲ್ಲಿ ನೀರಿನ ಮೂಲಗಳನ್ನು ಪರೀಕ್ಷೆಗೆ ಒಳಪಡಿಸಿ ಕುಡಿಯಲು ಯೋಗ್ಯ ಇರುವ ಬಗ್ಗೆ ದೃಢೀಕರಿಸಿಕೊಳ್ಳಲಾಗುತ್ತಿದೆ. ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಮಲೇರಿಯಾ ಪ್ರಕರಣಗಳ ಪತ್ತೆಗಾಗಿ ರಕ್ತ ಲೇಪನ ಸಂಗ್ರಹ ಮಾಡಲಾಗುತ್ತಿದ್ದು, ರೋಗ ದೃಢಪಟ್ವವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. 2024ರಲ್ಲಿ ಧಡಾರ-ರುಬೆಲ್ಲಾ ಎಲಿಮಿನೇಷನ್ ಗುರಿ ಹೊಂದಿದ್ದು, ಡ್ರಾಪೌಟ್ ಲೆಫ್ಟೌಟ್ ಮಕ್ಕಳನ್ನು ಗುರುತಿಸಿ ಧಡಾರ-ರುಬೆಲ್ಲಾ ಲಸಿಕೆ ನೀಡಿ ಗುರಿ ತಲುಪಲು ಪ್ರಯತ್ನಿಸಲಾಗುತ್ತಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಅಂಗನವಾಡಿ, ಶಾಲೆಗಳಲ್ಲಿ ವೈದ್ಯರು ಗುರುತಿಸುವ ಗಂಭೀರ ಕಾಯಿಲೆಯ ಮಕ್ಕಳ ಪಾಲಕರ ಮನವಲಿಸಿ ಜಿಲ್ಲಾ ಮತ್ತ ರಾಜ್ಯ ಹಂತದಲ್ಲಿ ಚಿಕಿತ್ಸೆ ಕೊಡಿಸಲು ಬಿಇಓ ಮತ್ತು ಸಿಡಿಪಿಓ ಅವರು ಸಹಕರಿಸಬೇಕು ಎಂದರು. ಸಭೆಯಲ್ಲಿ ತಾಲುಕು ಪಂಚಾಯತಿ, ಪುರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗು ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿನಾಯಕ ಜೋಶಿ ನಿರೂಪಿಸಿ ವಂದಿಸಿದರು.