ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಜೂ. 18 ರಂದು ವೀರಶೈವ ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.16-ಚಿತ್ರದುರ್ಗದ ವೀರಶೈವ ಲಿಂಗಾಯತ ಸಮಾಜದ ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜೂ. 18 ರಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಹಿರಿಯ ಮುಖಂಡ ಕೋಡಿಮೋಳೆ ರಾಜಶೇಖರ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜದ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ.
ಕಳೆದ ಎರಡು ತಿಂಗಳ ಹಿಂದೆ ನೇಹಾ ಹತ್ಯೆ ಪ್ರಕರಣ ನಡೆಯಿತು. ಇತ್ತೀಚೆಗೆ ವೀರಶೈವ ಲಿಂಗಾಯತ ಸಮಾಜದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಪೋಕ್ಸೊ ಪ್ರಕರಣ ದಾಖಲು ಮಾಡಿ, ಮೂರು ತಿಂಗಳು ರಾಜ್ಯ ಸರ್ಕಾರ ಸುಮ್ಮನಿದ್ದು, ಈಗ ತರಾತುರಿಯಲ್ಲಿ ಬಂಧಿಸಲು ಪಿತೂರಿ ಮಾಡಿದೆ. ಈಗ ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡು ಚಲನಚಿತ್ರ ನಟ ದರ್ಶನ್ ಮತ್ತು ಗ್ಯಾಂಗ್ ಬರ್ಬರ್ ಆಗಿ ಹತ್ಯೆ ಮಾಡಿದೆ. ಮಾನವೀಯತೆ ನೆಲಗಟ್ಟಿನಲ್ಲಿಯೂ ನೋಡದೆ, ದರ್ಶನ್ ಸೇರಿದಂತೆ 17 ಜನರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದಲ್ಲಿ ನಿರಂತರ ದೌರ್ಜನ್ಯಗಳು ನಡೆಯುತ್ತಿದೆ. ಈ ಸಮಾಜವನ್ನೇ ಗುರಿಯಾಗಿಸಿಕೊಂಡು ಕೊಲೆ ಹಾಗು ಕಿರುಕುಳದಂತಹ ಪ್ರಕರಣಗಳು ನಡೆಯುತ್ತಿದೆ. ಇದು ತಪ್ಪಾಗಿದೆ. ಸರ್ಕಾರ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ದ ಉಗ್ರ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ರೇಣುಕಸ್ವಾಮಿ ಹತೆÀ್ಯ ಮಾಡಿರುವುದು ತೀವ್ರ ಖಂಡನೀಯ. ಚಿತ್ರನಟ ದರ್ಶನ್ ಹಾಗೂ ಗ್ಯಾಂಗ್ ಮಾಡಿರುವ ಈ ಕೃತ್ಯವನ್ನು ವೀರಶೈವ ಸಮಾಜ ಜೊತೆಗೆ ಇಡೀ ನಾಗರೀಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಪೊಲೀಸ್ ಇಲಾಖೆಯ ಸೂಕ್ತ ಕ್ರಮ ವಹಿಸಿ, ಆರೋಪಿಗಳನ್ನು ಬಂಧಿಸಿರುವುದು ನ್ಯಾಯೋಚಿತವಾಗಿದೆ. ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದರು.
ಸಮಾಜದ ಮುಖಂಡ ಆಲೂರುಮಲ್ಲು ಮಾತನಾಡಿ, ರೇಣುಕಸ್ವಾಮಿ ಹತ್ಯೆ ಮಾಡಿರುವ ದರ್ಶನ್ ಅನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕಲ್ಪಿಸಿ, ಸೂಕ್ತ ಭದ್ರತೆ ನೀಡಬೇಕು. ಸರ್ಕಾರ ಕೂಡಲೇ ಪರಿಹಾರ ಘೋಷಣೆ ಮಾಡಿ ಮೃತ ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.
ಈ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಜಿಲ್ಲೆಯ ಐದು ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಹಾಗೂ ಸಹೃದಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಸಂಘಟನೆಯ ಮುಖಂಡರು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಎನ್‍ರಿಎಚ್ ಮಹದೇವಸ್ವಾಮಿ, ಮಹಾಸಭಾದ ತಾಲೂಕು ಅಧ್ಯಕ್ಷÀ ಚಾ.ನಗರ ನಟೇಶ್, ಗುಂಡ್ಲುಪೇಟೆಯ ಹಂಗಳ ನಂಜಪ್ಪ, ನೌಕರರ ಸಂಘದ ಮಾಜಿ ಅಧ್ಯಕ್ಷ ಡಾ. ಪರಮೇಶ್ವರಪ್ಪ ಇತರರು ಇದ್ದರು.