ಆಂಡಿಪಾಳ್ಯದ ಕಾಡಂಚಿನ ಭಾಗದಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸುವಂತೆ ಒತ್ತಾಯಿಸಿ ಡಿಸಿಗೆ ಮನವಿ
ಸಂಜೆವಾಣಿ ವಾರ್ತೆ
ಹನೂರು ಜೂ 16 :- ಜಿಲ್ಲೆಯ ಹನೂರು ತಾಲೂಕಿನ ಆಂಡಿಪಾಳ್ಯ ಕಾಡಂಚಿನ ಭಾಗದ ಕಂದಕದಲ್ಲಿ ಬೆಳೆದುಕೊಂಡಿರುವ ಜಂಗಲ್ ಕಟಿಂಗ್ ಮಾಡಬೇಕು. ರೈಲ್ವೆ ಕಂಬಿಗಳನ್ನು ಅಳವಡಿಸಿ  ಪ್ರಾಣಿ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಪ್ರಧಾನ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಅವರ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಲಾಯಿತು.
ಆಂಡಿಪಾಳ್ಯ ಗ್ರಾಮದಲ್ಲಿ 1500 ರಿಂದ 2000 ಸಾವಿರ ಹೆಚ್ಚು ಹಾಲಿ ಅನುಭವದಲ್ಲಿ ರೈತರು ಇದ್ದು, ಇವರೆಲ್ಲರೂ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಇವರು ಬೆಳೆಯುವ ಆಲೂಗೆಡ್ಡೆ, ಈರುಳ್ಳಿ, ಅರಿಶಿನ, ಬಾಳೆ, ತೆಂಗು, ಇತರ ಬೆಳೆಗಳನ್ನು ಬೆಳೆಯುತ್ತಿದ್ದು, ಇವುಗಳಿಗೆ ರಕ್ಷಣೆಗೆ ಇಲ್ಲದೆ ರಾತ್ರಿವೇಳೆಯಲ್ಲಿ ಆನೆ, ಚಿರತೆ, ಕಾಡುಹಂದಿ, ಜಿಂಕೆ, ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದ ರೈತರಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಈ ಸಂಬಂಧ ಲೊಕ್ಕನಹಳ್ಳಿ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ರೈತರಿಗೆ ಅರಣ್ಯ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಫಿನಿಕ್ಸ್ ಬ್ಯಾಟರಿ ಉಚಿತವಾಗಿ ನೀಡಬೇಕು.
ಕಾಡುಪ್ರಾಣಿಗಳು ರೈತರ ಜಮೀನುಗಳತ್ತ ಬರದಂತೆ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ದೊಡ್ಡಿಂದುವಾಡಿ ಸಿದ್ದರಾಜು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲೂರುನಾಗೇಂದ್ರ, ಹನೂರು ತಾಲೂಕು ಅಧ್ಯಕ್ಷ ಮುರುಗೇಶ್, ಮುತ್ತು ಹಾಜರಿದ್ದರು.