ಪುರಸಭಾ ವಾಣಿಜ್ಯ ಮಳಿಗೆಗಳ ಬಿಡ್ಡುದಾರರಿಗೆ ಹಸ್ತಾಂತರ ಮಾಡಿಲ್ಲ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.16:- ಪಟ್ಟಣದ ಪುರಸಭೆಗೆ ಸೇರಿದ 72 ಹಳೆಯ ಮತ್ತು 2 ಹೊಸ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಮುಗಿದು ನಾಲ್ಕು ತಿಂಗಳು ಕಳೆದಿದ್ದರು ಈ ವರೆಗೆ ಅವುಗಳನ್ನು ಹರಾಜುದಾರರ ಸುಪರ್ದಿಗೆ ಒಪ್ಪಿಸದಿರುವುದರಿಂದ ಪ್ರತಿ ತಿಂಗಳು ಪುರಸಭೆಗೆ ಲಕ್ಷಾಂತರ ರೂಗಳ ನಷ್ಠವಾಗುತ್ತಿದೆ.
ಈ ಹಿಂದೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದವರ ಅವದಿ ಮುಗಿದ ಹಿನ್ನೆಲೆಯಲ್ಲಿ ಬಾಗಿಲು ಹಾಕಿಸಿ ಪೆ,29 ರಂದು ಇ-ಪ್ರಕ್ರೂಮೆಂಟ್ ಮೂಲಕ ಬಹಿರಂಗ ಹರಾಜು ಮಾಡಲಾಗಿತ್ತಾದರು ಈ ವರೆಗೆ ಹೊಸ ಬಿಡ್ಡುದಾರರಿಗೆ ಹಸ್ತಾಂತರ ಮಾಡಿಲ್ಲ.
ಹಳೆಯ ಬಾಡಿಗೆದಾರರಿಂದ ಪ್ರತಿ ತಿಂಗಳು 3 ರಿಂದ 4 ನಾಲ್ಕು ಲಕ್ಷಗಳ ರೂ ಬಾಡಿಗೆ ಬರುತ್ತಿತ್ತು ಆದರೆ ಹೊಸ ಬಿಡ್ಡುದಾರರಿಗೆ ಪೈಪೆÇೀಟಿ ನಡೆಸಿ ಹರಾಜಿನಲ್ಲಿ ಪಡೆದಿರುವುದರಿಂದ ಮಾಸಿಕ 25 ಲಕ್ಷ ರೂ ಬಾಡಿಗೆ ಬರುತ್ತದೆ ಆದರೆ ಈ ವಿಚಾರದಲ್ಲಿ ಯಾರಿಗೂ ಆಸಕ್ತಿ ಇಲ್ಲವಾಗಿದೆ.
ಮಳಿಗೆಗಳ ಹರಾಜು ನಡೆದ ನಂತರ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ನೀತಿ ಸಂಹಿತೆ ನೆಪ ಹೇಳಿ ವಿಳಂಬ ನೀತಿ ಅನುಸರಿಸಿದ ಪುರಸಭೆಯವರು ಈಗಲೂ ಆ ಬಗ್ಗೆ ಗಮನಹರಿಸಿದೆ ನಿರ್ಲಕ್ಷ ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಾಣಿಜ್ಯ ಮಳಿಗೆಗಳ ಹರಾಜಿನ ವಿಚಾರದಲ್ಲಿ ಕೆಲವು ಒಳ ಒಪ್ಪಂದಗಳು ನಡೆದಿವೆ ಎಂಬ ಗುಸುಗುಸು ಹಬ್ಬಿದ್ದು ಇದಕ್ಕೆ ಪೂರಕವಾದ ಸಾಕ್ಷಿಗಳು ಮತ್ತು ಪ್ರಸ್ತುತ ಪುರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದಿರುವುದರಿಂದ ಹೇಳುವವರು ಕೇಳುವವರೆ ಇಲ್ಲವಾಗಿದೆ.
ಪಟ್ಟಣದ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಅವದಿ ಮುಗಿದಿದ್ದರಿಂದ ಅವುಗಳ ಬಾಗಿಲಿಗೆ ಬೀಗ ಹಾಕಿಸಿದ್ದರು ಅಕ್ರಮವಾಗಿ ಬಾಗಿಲು ತೆರದು ಅಲ್ಲಿಯೆ ಸಾಮಾನು ಸರಂಜಾಮುಗಳನ್ನು ತುಂಬಿಕೊಂಡು ಮಳಿಗೆಗಳ ಮುಂದೆ ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಅಂತಹ ಮಳಿಗಳಿಗೆ ಸೀಲಿನ ಬೀಗ ಮುದ್ರೆ ಹಾಕಿದರು.
ಈ ಬಗ್ಗೆ ನಗರ ಜೆಡಿಎಸ್ ಕಾರ್ಯದರ್ಶಿ ರುದ್ರೇಶ್ ಮತ್ತು ಇತರ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ತಮ್ಮ ಕಛೇರಿ ಸಿಬ್ಬಂದಿಯೊಡನೆ ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿಗಳು ಬೀಗ ಮುದ್ರೆ ಹಾಕಿಸಿ ಮತ್ತೆ ಬಾಗಿಲು ತೆಗೆಯುವ ಪ್ರಯತ್ನ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಳಿಗೆಗಳ ಹೊಸ ಬಿಡ್ಡುದಾರರು ನಾವು ಲಕ್ಷಾಂತರ ರೂಪಾಯಿ ಠೇವಣಿ ಹಣ ಕಟ್ಟಿ ಹರಾಜಿನ ಮೂಲಕ ಮಳಿಗೆಗಳನ್ನು ಪಡೆದಿದ್ದರು ಈವರೆಗೆ ಯಾಕೆ ನಮ್ಮ ಸುಪರ್ದಿಗೆ ನೀಡುತ್ತಿಲ್ಲವೆಂದು ಪುರಸಭೆ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಇದಕ್ಕುತ್ತರಿಸಿದ ಅವರು ಹರಾಜು ಪ್ರಕ್ರಿಯೆ ನಡೆದ ನಂತರ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ನಾನು ಬೇರೆಡೆಗೆ ನಿಯೋಜನೆಗೊಂಡಿದ್ದೆ ಹಾಗಾಗಿ ಆನಂತರ ಬಂದವರು ಆ ಕೆಲಸ ಮಾಡಬೇಕಿತ್ತು ಆದ್ದರಿಂದ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.