ಮುಂಗಾರು ಹಂಗಾಮಿನಲ್ಲಿ ಬೀಜ, ರಸಗೊಬ್ಬರ ಕೊರತೆಯಾಗದಂತೆ ಸಮರ್ಪಕ ವಿತರಣೆಗೆ ಕ್ರಮ ವಹಿಸಿ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.16: ಮುಂಗಾರು ಹಂಗಾಮಿನಲ್ಲಿ 7,11,370 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 19,567 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಬಿಡುವಿನ ನಂತರ ಬಿತ್ತನೆ ಪ್ರಗತಿಯಾಗಲಿದ್ದು, ಮುಂಗಾರು ಹಂಗಾಮಿನಲ್ಲಿ ಯಾವುದೇ ಬೀಜ, ರಸಗೊಬ್ಬರದ ಕೊರತೆಯಾಗದಂತೆ ಸಮರ್ಪಕವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ, ಬೀಜ ವಿತರಣೆಯಲ್ಲಿ ಯಾವುದೇ ಗೊಂದಲಗಳಾಗದಂತೆ ನೋಡಿಕೊಂಡು ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ವಿತರಣೆ ಸಂದರ್ಭದಲ್ಲಿ ಜನಜಂಗುಳಿಯಾಗದಂತೆ ನೋಡಿಕೊಂಡು ಪೂರ್ವಸಿದ್ಧತೆಯೊಂದಿಗೆ ವಿತರಣೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ 7720.80 ಕ್ವಿಂ. ವಿವಿಧ ಬಿತ್ತನೆ ಬೀಜ ವಿತರಿಸಲಾಗಿದೆ. ಬೀಜದ ಯಾವುದೇ ಕೊರತೆ ಇಲ್ಲ. 3203.72 ಕ್ವಿಂಟಲ್‍ನಷ್ಟು ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಬೇಡಿಕೆಗೆ ತಕ್ಕಂತೆ ಸರಬರಾಜು ವ್ಯವಸ್ಥೆಗೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಟಿಸಿ ಸುಟ್ಟ ನಂತರ ತಕ್ಷಣವೇ ಮರು ಸ್ಥಾಪನೆಗೆ ಕ್ರಮ ವಹಿಸಬೇಕು. ಆದ್ಯತೆ ಮೇಲೆ ಮರು ಸ್ಥಾಪಿಸಲು ಕ್ರಮ ವಹಿಸಬೇಕು. ರೈತರ ಬೇಡಿಕೆಯನುಸಾರವಾಗಿ ವಿಳಂಬ ಮಾಡದೇ ಸಕಾಲದಲ್ಲಿ ಟಿಸಿ ಒದಗಿಸಬೇಕು ಎಂದು ಸೂಚಿಸಿದರು.
ವಿಜಯಪುರ ನಗರದ ಸ್ಕೂಲ್ ನಂ.4 ಶಾಲೆಗೆ ನಾಳೆಯೇ ಭೇಟಿ ನೀಡಿ, ಕಟ್ಟಡ, ಕೊಠಡಿಗಳ ವ್ಯವಸ್ಥೆ, ಪೀಠೋಪಕರಣ ವ್ಯವಸ್ಥೆ ಸೇರಿದಂತೆ ಶಾಲಾ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸಚಿವರು ಸೂಚನೆ ನೀಡಿದರು.
ನಗರದಲ್ಲಿನ ಪುನಶ್ಚೇತನಗೊಳಿಸಲಾದ ಐತಿಹಾಸಿಕ ಭಾವಿಗಳ ನೀರನ್ನು ಗೃಹಬಳಕೆ ಉಪಯೋಗಿಸಲು ಕ್ರಮ ವಹಿಸಬೇಕು. ಇದರಿಂದ ಕುಡಿಯುವ ನೀರಿನ ಪೂರೈಕೆಯ ಒತ್ತಡ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಲಿರುವುದರಿಂದ ಈ ಭಾವಿಗಳ ನೀರನ್ನು ಗೃಹೋಪಯೋಗಿಗೆ ಬಳಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಹಲವು ನೀರಾವರಿ ಯೋಜನೆಗಳಿಂದ ಅಂತರಜಲಮಟ್ಟ ಹೆಚ್ಚಾಗಿದೆ. ಇದರಿಂದ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಕೆರೆ ತುಂಬುವ ಯೋಜನೆ ಕೂಡ ಫಲಪ್ರದವಾಗಿದ್ದು, ಹಳ್ಳಗಳ ಮೂಲಕ ಬಾಂದಾರ ನಿರ್ಮಿಸಿ ರೈತರಿಗೆ ಮತ್ತಷ್ಟು ಅಂತರ್ಜಲ ಹೆಚ್ಚಿಸಲು ಹಳ್ಳಗಳ ಸಮೀಕ್ಷೆ ಕಾರ್ಯ ಕೈಗೊಂಡು ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಿ,ಹಳ್ಳಗಳ ಮಾಹಿತಿ ಕ್ರೋಢಿಕರಿಸಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ನೀರಾವರಿ ಯೋಜನೆಗಳಿಂದ ಅಂತರ್ಜಲ ಹೆಚ್ಚಾಗಿರುವುದರಿಂದ ಇಂತಹ ಭೀಕರ ಬರಗಾಲದ ಪರಿಸ್ಥಿತಿಯಲ್ಲಿಯೂ ಸಹ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಟ್ಯಾಂಕರ್‍ಗಳನ್ನು ಬಳಸಿ ಕುಡಿಯುವ ನೀರು ಒದಗಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜುವಿಗೆ ಇತಿಶ್ರೀ ಹಾಡಲು ಸೂಕ್ತ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಇದೇ ತಿಂಗಳು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿನ್ಸೆಂಟ್ ಡಿಸೋಜ್ ಅವರಿಗೆ ಸಚಿವರು ಸಭೆಯಲ್ಲಿ ಸನ್ಮಾನಿಸಿದರು.
ಸಭೆಯಲ್ಲಿ ದೇವರಹಿಪ್ಪರಗಿ ಶಾಸಕÀ ರಾಜುಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ, ಜಿಲ್ಲಾ ಪಂಚಾಯತ್ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಕೊಟಗಸ್ತಿ ಹಾಗೂ ನೂರಅಹ್ಮದ ಅತ್ತಾರ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಋಷಿಕೇಶ ಸೋನಾವಣೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.