ಪರಿಸರ ಸಂರಕ್ಷಣೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೬; ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಪರಿಸರ ಕಾಳಜಿ ವಹಿಸಬೇಕು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ನಾಗರೀಕರೂ ಕೈಜೋಡಿಸಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಪರಿಸರ ಸಮತೋಲನೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪದ ಕ್ರೀಡಾಭವನದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪರಿಸರ ಸಂರಕ್ಷಣೆ ಕಾರ್ಯಕ್ಕೆ ವಿದ್ಯಾರ್ಥಿಗಳು ಜಾಗೃತರಾಗುವುದರ ಜತೆಗೆ ತಮ್ಮ ಕುಟುಂಬ ಹಾಗೂ ನೆರೆಹೊರೆಯವನ್ನೂ ಜಾಗೃತ ಮಾಡಬೇಕು. ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೇ, ಅಂಕಪಟ್ಟಿ ಹೊರತಾಗಿ ನಮ್ಮ ಜೀವನ ರೂಪಿಸಿಕೊಳ್ಳುವ ಕೌಶಲ್ಯಭರಿತ ಶಿಕ್ಷಣ ಪಡೆಯುವಂತಾಗಬೇಕು. ಮನೆಯಿಂದಲೇ ಪರಿಸರ ಜಾಗೃತಿ ಮೂಡಬೇಕು. ನಮ್ಮ ಮನೆ, ನಮ್ಮ ಮನಸ್ಸು ಸ್ವಚ್ಛವಾಗಿದ್ದರೆ ಪರಿಸರವೂ ಸ್ವಚ್ಛವಾಗಿರಲಿದೆ ಎಂದರು.ನಾವುಗಳು ಪರಿಸರದ ಮೇಲೆ ದೌರ್ಜನ್ಯ ಮಾಡುತ್ತಾ ಹೋದಂತೆ ಮುಂದಿನ ದಿನಗಳಲ್ಲಿ ಭೂಮಂಡಲದಲ್ಲಿ ಮನುಷ್ಯ ಬದುಕುವ ಪರಿಸ್ಥಿತಿ ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಮಕ್ಕಳು ಪರಿಸರದ ಕಾಳಜಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಲಯ ಅರಣ್ಯಾಧಿಕಾರಿ ಉಷಾರಾಣಿ ಮಾತನಾಡಿ, ಪ್ರತಿ ವರ್ಷವೂ ಜೂನ್ 5ರಂದು ವಿಶ್ವ ಪರಿಸರ ದಿನ ಆಚರಣೆ ಮಾಡಲಾಗುತ್ತದೆ. ಅರಣ್ಯ ಇಲಾಖೆ ವತಿಯಿಂದಲೂ ಗಿಡಗಳನ್ನು ಬೆಳೆಸಿ ವಿತರಣೆ ಮಾಡಲಾಗುತ್ತದೆ. ಪರಿಸರ ಉಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸಬೇಕು. ಪರಿಸರ ಸಂರಕ್ಷಣೆ ನಿರಂತರ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಪ್ರತಿಯೊಬ್ಬರು ಪರಿಸರಸ್ನೇಹಿ ಜೀವನ ನಡೆಸಬೇಕು. ಪ್ರಕೃತಿ ಹಾಳು ಮಾಡಿದರೆ ಮನುಷ್ಯ ಜೀವನ ನಡೆಸಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಬಳಕೆ ದೂರಮಾಡಿ ಬಟ್ಟೆ ಬ್ಯಾಗ್ ಬಳಸಬೇಕು ಎಂದು ಕಿವಿಮಾತು ಹೇಳಿದರು.ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರಿತ್ಯಾದಿಂಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಪ್ರಜ್ಞೆ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ನೀಡಿ, ಪರಿಸರ ಕಾಳಜಿ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.