ಮಕ್ಕಳಿಗೆ ದುಡಿಮೆ ಬೇಡ, ಶಿಕ್ಷಣ ನೀಡಿ
ಜೇವರ್ಗಿ :ಜೂ.16: ಸರಕಾರ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಪಾಲಕರು ಮಕ್ಕಳಿಗೆ ದುಡಿಮೆಗೆ ಕಳಿಸಿದೆ, ಶಿಕ್ಷಣ ನೀಡಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಹೇಳಿದರು
ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಬುಧವಾರ ಏರ್ಪಡಿಸಲಾಶಗಿದ್ದ ‘ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದ ಅವರು ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು, ಅದರ ನಿರ್ಮೂಲನೆಗೆ ಸಂವಿಧಾನ, ಸರ್ಕಾರಗಳು ಅನೇಕ ಕಾಯ್ದೆ-ಕಾನೂನುಗಳನ್ನು ಜಾರಿಗೊಳಿಸಿದೆ. ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ನಿರ್ಮೂಲನೆ ಮಾಡಲು ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ಪಾಲಕ-ಪೋಷಕ, ಉದ್ಯೋಗದಾತರ ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮಕ್ಕಳಿಗೆ ದುಡಿಮೆಗೆ ಕಳಿಸಿದೆ, ಶಿಕ್ಷಣ ನೀಡಬೇಕು ಎಂದು ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಹೇಳಿದರು.
ನಂತರ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಕಾರ್ಮಿಕ ಕಾನೂನುಗಳು ಸ್ವಾತಂತ್ರ್ಯ ಪೂರ್ವದಿಂದಲೇ ರಚಿಸಲಾಗಿದೆ. ನಂತರ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿ ಬಾಲ ಕಾರ್ಮಿಕತೆಯ ನಿರ್ಮೂಲನೆಗೆ ಶ್ರಮಿಸಲಾಗುತ್ತಿದೆ. ಶಿಕ್ಷಣ ದೊರೆತರೆ ಹಾಗೂ ಬಡತನ ನಿರ್ಮೂಲನೆಯಾದರೆ ಬಾಲ ಕಾರ್ಮಿಕತೆ ನಿರ್ಮೂಲನೆಯಾಗುತ್ತ ಎಂಬ ಸಂಗತಿಯಿಂದ ಸರ್ಕಾರಗಳು ಅನೇಕ ಸೌಕರ್ಯಗಳನ್ನು ನೀಡುತ್ತಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಪಾಲಕ-ಪೋಷಕ ವರ್ಗದವರು ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದೆ, ಶಿಕ್ಷಣ ನೀಡಿ ಸದೃಢ ಮಾನವ ಸಂಪನ್ಮೂಲವನ್ನಾಗಿಸಬೇಕು. ಬಾಲ ಕಾರ್ಮಿಕತೆಯಿಂದಾಗುವ ದುಷ್ಪರಿಣಾಮಗಳನ್ನು ಬಾಲ ಕಾರ್ಮಿಕರು, ಪಾಲಕ-ಪೋಷಕ, ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟು, ಅವರಲ್ಲಿ ಮಾನಸಿಕ ಧೈರ್ಯವನ್ನು ತುಂಬಬೇಕು. ಅಂತಹ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಯೋಜನೆ,ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿ ನಾಶಪಡಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ದೊಡ್ಡಮನಿ, ಪ್ರಮುಖರಾದ ರಕ್ಷಿತಾ, ಶುಗುಪ್ತ, ಸೋಹೆಲ್ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ಉಪನ್ಯಾಸಕರಾದ ಅಶ್ವಿನಿ, ಅರ್ಚನಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಅಮೃತ ಸಿ.ಪಾಟೀಲ, ಗುರುಶಾಂತಪ್ಪ, ಮಲ್ಲಿಕಾರ್ಜುನ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.