ಬಸವತತ್ವ ಶರಣ ಜಾಗೃತಿ ಕಾರ್ಯಗಾರ

ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಜೂ-16 : ಲಿಂಗಾಯಿತ ಧರ್ಮದಲ್ಲಿ ಇನ್ನೂ ತಾತ್ವಿಕ ಹೊಂದಾಣಿಕೆ ಇಲ್ಲ. ಪರಸ್ಪರರಲ್ಲಿ ಅರಿವಿನ ಕೊರತೆ ಇದೆ. ಇದಕ್ಕೆ ನಾವು ಮೊದಲು ಮದ್ದನ್ನು ಕಂಡುಹಿಡಿದು ಆ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಬೇಕಿದೆ ಎಂದು ಕುಂಬಳಗೂರಿನ ಬಸವ ಗುರುಕುಲದ ಮುಖ್ಯಸ್ಥರಾದ ಶಿವಾನಂದ ಗುರೂಜಿ ಅಭಿಪ್ರಾಯಪಟ್ಟರು.ಅವರು ನಗರದ ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಬಸವತತ್ವ ಶರಣ ಜಾಗೃತಿ ಕಾರ್ಯಗಾರ ಉದ್ಘಾಟನಾ ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದರು. ಬಸವ ಧರ್ಮದಲ್ಲಿ ಲಿಂಗಾಯತ ತತ್ವ ಇದೆ ಎನ್ನುವುದನ್ನು ಅರಿಯಬೇಕಿದೆ. ನಮ್ಮ ಆಚರಣೆಗಳು ಬಹುತೇಕ ಮೂಢನಂಬಿಕೆಗಳಿAದ ಕೂಡಿದ್ದು, ನಾವು ಆಚರಿಸುವುದಲ್ಲದೆ ಬೇರೆಯವರನ್ನು ಅದೇ ದಾರಿಗೆ ಕೊಂಡೊಯ್ಯುವ ಮೂಲಕ ಅಂಧಸAಪ್ರದಾಯಕ್ಕೆ ಶರಣಾಗಿರುವುದರಿಂದ ತತ್ವ ಪ್ರಚಾರಕ್ಕೆ ಅಡಚಣೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಹನ್ನೆರಡನೇ ಶತಮಾನದ ಕ್ರಾಂತಿ ಅದು ಕೇವಲ ಧರ್ಮ ಜಾಗೃತಿಯಾಗಿರದೇ ಸಾಮಾಜಿಕವಾಗಿ ಸಮಾನತೆ ತರುವ ಪ್ರಜಾಪ್ರಭುತ್ವವಾದಿ ಜಾಗೃತಿ ಆಂದೋಲನವಾಗಿತ್ತು. ಹಾಗಾಗಿ ಬಸವಾದಿ ಶರಣರ ವಿಚಾರಧಾರೆಗಳು ಕೇವಲ ಭಾರತಕ್ಕಷ್ಟೇ ಮೀಸಲಾಗದೆ ವಿಶ್ವಕ್ಕೆ ತಲುಪಲು ಆ ಮೂಲಕ ಅನುಷ್ಠಾನಕ್ಕೆ ಬರಲು ಸಾಧ್ಯವಾಯಿತು ಎಂದು ಮೈಸೂರಿನ ಭಾವೈಕ್ಯ ಕೇಂದ್ರದ ಹಾಗೂ ಮುರುಘರಾಜೇಂದ್ರ ಮಹಾಲಿಂಗೇಶ್ವರ ಮಠದ ಬಸವಲಿಂಗ ಮೂರ್ತಿ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.