ಸ್ವಗ್ರಾಮ ಸರಸಂಬಾದಲ್ಲಿ ವಿಜಯಕುಮಾರ್ ಅಂತ್ಯಕ್ರಿಯೆ: ಮುಗಿಲು ಮುಟ್ಟಿದ ಆಕ್ರಂದನ
ಆಳಂದ,ಜೂ.15-ಕುವೈತ್‍ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ತಾಲ್ಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ್ ಪ್ರಸನ್ನ (40) ಅವರ ಪಾರ್ಥಿವ ಶರೀರವನ್ನು ಇಂದು ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ವಿಜಯಕುಮಾರ ಅವರ ಪಾರ್ಥಿವ ಶರೀರ ಅಂಬ್ಯುಲೆನ್ಸ್‍ನಲ್ಲಿ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಕುಟುಂಬದವರ ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಎಲ್ಲರ ಮುಖದಲ್ಲಿ ಶೋಕ ಮಡುಗಟ್ಟಿತ್ತು. ಮೃತದೇಹಕ್ಕೆ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ನಂತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈಚೆಗೆ ಕುವೈತ್‍ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ವಿಜಯಕುಮಾರ್ ಮೃತಪಟ್ಟಿದ್ದರು. ಕಳೆದ 10 ವರ್ಷಗಳಿಂದ ಕುವೈತ್‍ನಲ್ಲಿ ನೆಲೆಸಿದ್ದ ವಿಜಯಕುಮಾರ್ ಅಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗ್ರಾಮಕ್ಕೆ ಬಂದು ಹೋಗಿದ್ದರು. ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರಿದ್ದಾರೆ.