“ನಮ್ಮ ಕಲಬುರಗಿ, ಹಸಿರು ಕಲಬುರಗಿ” ಆಂದೋಲನಕ್ಕೆ ಚಾಲನೆ
ಕಲಬುರಗಿ,ಜೂ.15-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ವಿದ್ಯಾನಗರದ ಪಂಚಶೀಲ ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ ಶುಕ್ರವಾರ “ಗಿಡ ನಾಟಿ ಮತ್ತು ಪರಿಸರ ಮಾಹಿತಿ” ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.
ಗಿಡ ನಾಟಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಮೂಹ ಸಂಪನ್ಮೂಲ ವಿಭಾಗದ ವೀರೇಶ್ ಅವರು “ಈ ವರ್ಷ ಕಲಬುರಗಿಯಲ್ಲಿ ಗರಿಷ್ಠ ಪ್ರಮಾಣದ ತಾಪಮಾನವನ್ನು ಕಂಡಿದ್ದೇವೆ, ಈ ತಾಪಮಾನ ಕಡಿಮೆ ಆಗಬೇಕು ಎಂದಾದರೆ ಗಿಡಗಳನ್ನು ನಾಟಿ ಮಾಡಿ ಸಂರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ ಪ್ರತಿ ಮನೆಯಲ್ಲಿ ಶುಭ ಸಮಾರಂಭಗಳಿಗೆ ಗಿಡ ನೆಡುವ ಪ್ರವೃತ್ತಿಯನ್ನು ಬೆಳೆಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಸಿಆರ್‍ಸಿ ವಿಭಾಗದ ಶ್ರೀಕಾಂತ ಅವರು ಮಾತನಾಡಿ, ಉತ್ತಮವಾದ ಪರಿಸರ ನಿರ್ಮಾಣ ಮಾಡಬೇಕು, ಮನೆಗೊಂದು ಮರ, ಊರಿಗೊಂದು ವನ, ನಾಡಿಗೊಂದು ಕಾಡು ಇರಬೇಕು ಎಂದು ಸಾಲುಮರದ ತಿಮ್ಮಕ್ಕನ ಉದಾಹರಣೆಯೊಂದಿಗೆ ಮಾಹಿತಿ ನೀಡಿದರು. ಶಾಲೆಯ ಯಾವ ಮಕ್ಕಳು ಜವಾಬ್ದಾರಿಯಿಂದ ಗಿಡ ಸಂರಕ್ಷಣೆ ಮಾಡಿ ಬೆಳೆಸುತ್ತಾರೋ ಅವರಿಗೆ ಮುಂದಿನ ವರ್ಷ ಬಹುಮಾನ ನೀಡುವುದಾಗಿ ತಿಳಿಸಿದರು.
ಕೃಷಿ ಮೇಲ್ವಿಚಾರಕ ವೀರೇಶ್ ಅವರು ಮಾತನಾಡಿ, “ನಮ್ಮ ಕಲಬುರಗಿ, ಹಸಿರು ಕಲಬುರಗಿ” ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಈ ವರ್ಷ 50,000 ಗಿಡ ನಾಟಿ ಮಾಡುವ ಸಂಕಲ್ಪವನ್ನು ಹೊಂದಲಾಗಿದೆ. ಗಿಡ ನೆಡುವುದರ ಜೊತೆಗೆ ಅದರ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಂದ ಗಿಡಗಳಿಗೆ “ವೃಕ್ಷ -ರಕ್ಷ” ಶ್ರೀರಕ್ಷೆಯನ್ನು ಕಟ್ಟಿಸಿದರು.
ವಿದ್ಯಾರ್ಥಿಗಳಿಗೆ ಗಿಡಗಳ ರಕ್ಷಣೆ ಮಾಡುವಂತೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದದವರು ಮತ್ತು ವಲಯದ ಮೇಲ್ವಿಚಾರಕಿ ಗಿರಿಜಾ ಮತ್ತು ಸೇವಾ ಪ್ರತಿನಿಧಿ ಪೂಜಾ ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತಿತರಿದ್ದರು.