ಚಂದನಹಳ್ಳಿ ಗ್ರಾಮದ ಬಹುತೇಕ ರಸ್ತೆಗಳ ಮೇಲೆ ಮಳೆ ನೀರು ಸಂಗ್ರಹ ಸುಗಮ ಸಂಚಾರಕ್ಕೆ ಸಾರ್ವಜನಿಕರ ಪರದಾಟ
ಹುಮನಾಬಾದ್ : ಜೂ.15:ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹುಮನಾಬಾದ್ ತಾಲೂಕಿನ ಚಂದನಹಳ್ಳಿ ಗ್ರಾಮದ ಬಹುತೇಕ ಓಣಿಗಳ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಸಂಗ್ರವಾಗಿರುವ ಕಾರಣ ಸುಗಮ ಸಂಚಾರಕ್ಕಾಗಿ ಸ್ಥಳೀಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಮುಖ ರಸ್ತೆಗಳ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡದಿರುವ ಕಾರಣ ಪ್ರತಿ ವರ್ಷ ಮಳೆ ಬಂದಾಗ ಹೀಗೆ ಮಳೆ ನೀರು ಸಂಗ್ರವಾಗುತ್ತದೆ. ಇದರಿಂದ ಇಲ್ಲಿ ನೋಣ, ಸೊಳ್ಳೆ ಹಾಗೂ ಹಂದಿಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಇಲ್ಲಿನ ಸ್ಥಳೀಯರು ಬದುಕು ನಿರ್ವಹಣೆ ಮಾಡುವುದು ಅನಿವಾರ್ಯವಾಗಿದೆ.
ಮಳೆ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದಿರುವ ಕಾರಣ ರಸ್ತೆ ಮೇಲೆ ಮಳೆ ನೀರು ಸಂಗ್ರಹವಾಗಿ ಮನೆಗಳಿಗೆ ನುಗ್ಗುತ್ತಿವೆ. ಈ ಸಮಸ್ಯೆ ಕುರಿತು ಪಂಚಾಯತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ನಮಗೆನೂ ಸಂಬಂಧ ಎನ್ನುವಂತೆ ಇಲ್ಲಿನ ಅಧಿಕಾರಿಗಳು ಜಾಣರಂತೆ ವರ್ತಿಸುತ್ತಿದ್ದಾರೆ ಎನ್ನುವುದು ಚಂದನಹಳ್ಳಿ ಗ್ರಾಮಸ್ಥರ ಆರೋಪವಾಗಿದೆ.
ಪ್ರತಿ ವರ್ಷ ಮಳೆ ಬಂದಾಗ ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗುತ್ತಿವೆ. ಹೀಗಾಗಿ ಗ್ರಾಮೀಣ ಭಾಗದ ಬಡಜನರ ಹಿತದೃಷ್ಟಿಯಿಂದ ತಾಲೂಕ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ದಲಿತ ಮುಖಂಡ ಭೀಮಶಾ ಹೆಗಡೆ ಮನವಿ ಮಾಡಿದ್ದಾರೆ.