ಸುರಿದ ಮಳೆಗೆ ಕೊಚ್ಚಿ ಹೋದ ಸೇತುವೆ
ಬಸವಕಲ್ಯಾಣ:ಜೂ.15: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹುಲಸೂರ ತಾಲೂಕಿನ ಗೋರ್ಟಾ (ಬಿ) ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ 2023-24ನೇ ಸಾಲಿನಲ್ಲಿ ನಿರ್ಮಿಸಿದ ಸೇತುವೆ ಮಳೆಯ ನೀರಿಗೆ ಕೊಚ್ಚಿ ಹೋಗಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.
ಭಾರಿ ಮಳೆಯಾಗುತ್ತಿರುನ ಹಿನ್ನಲೆ ಗೋರ್ಟಾ (ಬಿ) ಗ್ರಾಮದ ಅನೇಕ ಜಮೀನುಗಳಿಗೆ ನೀರು ನುಗ್ಗಿ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೊಗಿ ರೈತರು ಕಂಗಾಲಾಗಿದ್ದಾರೆ. ಕಾಲುದಾರಿಗಳು ಮಾಯವಾಗಿವೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ ಕೆಲ ತಿಂಗಳ ಹಿಂದಷ್ಟೇ ನರೇಗಾ ಯೋಜನೆ ಅಡಿ ಗೋರ್ಟಾ (ಬಿ) ಗ್ರಾಮದಲ್ಲಿ ನಿರ್ಮಿಸಿದ ಸೇತುವೆಗಳು ಸಂಪೂರ್ಣವಾಗಿ ಮಳೆಯಿಂದ ಕೊಚ್ಚಿ ಹೋಗಿವೆ, ಕಳಪೆ ಕಾಮಗಾರಿಗಳು ನಡೆಸಿರುವದು ಮೇಲ್ನೋಟಕ್ಕೆ ಕಂಡು ಬರುವಂತಾಗಿದೆ.
ನರೇಗಾ ಯೋಜನೆಯಡಿ ನಿರ್ಮಿಸುವ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ ಎಂದು ಈ ಹಿಂದೆ ಸಂಬಂಧ ಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳ ಕ್ಯಾರೆ ಅನ್ನಲಿಲ್ಲ ಅಂದೇ ಕ್ರಮ ಕೈಗೊಂಡರೆ ಉತ್ತಮ ರೀತಿಯಲ್ಲಿ ಕಾಮಗಾರಿಗಳು ಜರುಗುತ್ತಿದ್ದವು. ಸರಕಾರದ ಅನುದಾನ ಪೋಲಾಗುತ್ತಿರಲಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ಮಹೇಶ ಪಟ್ನೆ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.