ಪವನ ಶಕ್ತಿಯ ಸದುಪಯೋಗದಿಂದ ವಿದ್ಯುಚ್ಛಕ್ತಿ ಸಮಸ್ಯೆ ನಿವಾರಣೆಯಾಗಲು ಸಾಧ್ಯ
ಕಲಬುರಗಿ:ಜೂ.15: ಪ್ರತಿಯೊಂದು ಕಾರ್ಯಕ್ಕೆ ವಿದ್ಯುಚ್ಛಕ್ತಿಯ ಅವಲಂಬನೆ ಬಹಳಷ್ಟಿದೆ. ದಿನೇ-ದಿನೇ ಬೇಡಿಕೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಉತ್ಪಾದನಾ ಮೂಲಗಳ ಪ್ರಮಾಣ ಸಾಕಷ್ಟು ಲಭ್ಯವಾಗದಿರುವದರಿಂದ ಬೇಡಿಕೆಗೆ ಅದಕ್ಕೆ ತಕ್ಕಂತೆ ಉತ್ಪಾದನೆ, ಪೂರೈಕೆ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯಾವ ಪ್ರದೇಶಗಳಲ್ಲಿ ಗಾಳಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯವೋ, ಅಲ್ಲಿ ಪವನ-ವಿದ್ಯುಚ್ಛಕ್ತಿ ಕೇಂದ್ರಗಳ ಸ್ಥಾಪನೆ ಮಾಡಿ, ವಿದ್ಯುಚ್ಛಕ್ತಿ ಉತ್ಪಾದಿಸುವುದರತ್ತ ಗಮನಹರಿಸಬೇಕಾಗಿರುವುದು ಪ್ರಸ್ತುತವಾಗಿ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ಜಾಗತಿಕ ಪವನ ಶಕ್ತಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪವನಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯವಾಗಿದೆ. ಪರಿಸರ ಮಾಲಿನ್ಯ ರಹಿತವಾಗಿದ್ದು, ಆರ್ಥಿಕ ಮಿತವ್ಯಯ ಸಾಧ್ಯವಿದೆ. ಪವನಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಹಸಿರು ಮನೆ ಪರಿಣಾಮ, ಆಮ್ಲ ಮಳೆ ಸೇರಿದಂತೆ ವಿವಿಧ ಮಾಲಿನ್ಯಗಳು, ಪರಿಸರಕ್ಕೆ ಹಾನಿಯಾಗುವುದಿಲ್ಲ. ಭಾರತದಲ್ಲಿ 45.887 ಗಿಗಾ ವ್ಯಾಟ್ಸ್ ಪವನ ಶಕ್ತಿಯ ಸಾಮಥ್ರ್ಯ ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಇಂತಹ ಅಸಂಪ್ರದಾಯಿಕ ಇಂಧನಗಳ ಸದುಪಯೋಗ ಮಾಡಿಕೊಂಡರೆ ರಾಷ್ಟ್ರದ ಅಭಿವೃದ್ಧಿಯ ವೇಗ ಹೆಚ್ಚಳವಾಗಲು ಸಾಧ್ಯವಾಗುತ್ತದೆ. ಇಂಧನದ ಸಂರಕ್ಷಣೆ ಮತ್ತು ಸೂಕ್ತ ನಿರ್ವಹಣೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕರಾದ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಐಶ್ವರ್ಯ ಬಿರಾದಾರ, ಪೂಜಾ ಜಮಾದಾರ, ಪೂಜಾ ಹೂಗಾರ, ಸಾನಿಯಾ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.