ವ್ಯಕ್ತಿಯ ಜೀವ ಉಳಿಸುವ ಶಕ್ತಿ ಇರುವುದು ರಕ್ತಕ್ಕೆ ಮಾತ್ರ: ವಿಮಲ್ ಸಿಂಗ್
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜೂ.15:  ಒಬ್ಬ ವ್ಯಕ್ತಿಯ ಜೀವ ಉಳಿಸುವ ಶಕ್ತಿ ಇರುವುದು ರಕ್ತಕ್ಕೆ ಮಾತ್ರ ಎಂದು ಬಿ.ಎಂ.ಎಂ.ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ವಿಮಲ್ ಸಿಂಗ್ ಹೇಳಿದರು.
ಅವರು ಮರಿಯಮ್ಮನಹಳ್ಳಿಗೆ ಸಮೀಪದ ಡಣಾಪುರ ಬಳಿಯ ಬಿ.ಎಂ.ಎಂ.ಇಸ್ಮಾತ್, ಜೆ.ಎಸ್.ಡಬ್ಲ್ಯೂ ಫೌಂಡೇಶನ್, ಹೊಸಪೇಟೆಯ ಸರಕಾರಿ ಸಾರ್ವಜನಿಕ ಆಸ್ಪತ್ರೆ  ಹಾಗೂ  ಬಳ್ಳಾರಿಯ ವಿಮ್ಸ್ ರಕ್ತ ಭಂಡಾರದ ಸಹಯೋಗದಲ್ಲಿ ನಡೆದ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಜ ಸಮಾಜಕ್ಕೆ ನೀಡುವ ಮಹತ್ತರ ದಾನಗಳಲ್ಲಿ  ರಕ್ತದಾನವೇ ಶ್ರೇಷ್ಠವಾದ ದಾನವಾಗಿದೆ. ಒಂದು ಉತ್ತಮ ರಕ್ತ ಕನಿಷ್ಠ ಮೂರು ವ್ಯಕ್ತಿಗಳಿಗೆ ಸಹಕಾರಿಯಾಗುತ್ತದೆ. ಅಲ್ಲದೇ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವುದರಿಂದ ಒಂದು ಅಮೂಲ್ಯ ಜೀವ ಉಳಿಸಿದ ಹೆಮ್ಮೆ ನಮ್ಮದಾಗುತ್ತದೆ ಎಂದರು. ಅಲ್ಲದೇ ಯಾವುದೇ ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಈ ಅಭೂತಪೂರ್ವ ಕಾರ್ಯಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಸ್ವ ಇಚ್ಛೆಯಿಂದ ರಕ್ತದಾನಕ್ಕೆ ಮುಂದಾಗಬೇಕಿದೆ. ಸಾರ್ವಜನಿಕರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿಯೇ ಪ್ರತಿ ವರ್ಷ ಜೂನ್ 14ರಂದು ರಕ್ತದಾನಿಗಳ ದಿನವನ್ನಾಗಿ ಸಾರ್ವತ್ರಿಕವಾಗಿ ಆಚರಿಸಲಾಗುತ್ತಿದೆ ಎಂದರು.
ನಂತರ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ
ಡಾ. ಪಿ.ವಿಜಯ ವೆಂಕಟೇಶ್ ಮಾತನಾಡಿ, ರಕ್ತದಾನದ ಬಗೆಗಿರುವ ತಪ್ಪು ತಿಳುವಳಿಕೆಗಳ ಕುರಿತು ಮಾಹಿತಿ ನೀಡಿದರು.  ಅಲ್ಲದೇ ರಕ್ತದಾನ ಮಾಡುವುದರಿಂದಾಗುವ ಪ್ರಯೋಜನಗಳ ಕುರಿತು ಜನರಲ್ಲಿ ಸರಿಯಾದ ತಿಳುವಳಿಕೆ ಮೂಡಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಬಹು ಮುಖ್ಯವಾಗಿ ರಸ್ತೆ ಅಪಘಾತ, ಹೆರಿಗೆ ಸಂದರ್ಭ ಮತ್ತು ತೀರಾ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಎಂದರು. ರಕ್ತದಾನ ಮಾಡುವುದರಿಂದ ಮನುಷ್ಯರಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದೂ ಅಲ್ಲದೇ ಕಾರ್ಯ ತತ್ಪರತೆ ಜೊತೆ ಕೊಲೆಸ್ಟ್ರಾಲ್ ಪ್ರಮಾಣವೂ ತಗ್ಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಂ.ಎಂ.ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಪ್ರಧಾನ ಹಣಕಾಸು ಅಧಿಕಾರಿ ವಿ.ವಿ.ವಿ.ರಾಜು, ಉಪಾಧ್ಯಕ್ಷ ಮನೀಶ್ ಡಿ.ವರ್ಣೇಕ‌ರ್, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ, ಹಣಕಾಸು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಂದ್ರ ಮುಂದ್ರಾ, ಜಿಲ್ಲಾ ಆಸ್ಪತ್ರೆಯ ಡಾ.ಸೋಮಶೇಖರ, ಸಂಸ್ಥೆಯ ವೃತ್ತಿಯ ಆರೋಗ್ಯ ಕೇಂದ್ರದ ಡಾ.ಅಂಜನಿ, ಡಾ.ಸುಧೀರ್, ಡಾ.ಜನಾರ್ದನ, ಡಾ.ಅನುಷ, ವಿಮ್ಸ್‌ನ ಸಿಬ್ಬಂದಿಗಳಾದ ಸಂತೋಷ, ಜಗದೀಶ್ ಹಾಗೂ ಬಿಎಂಎಂ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.