ಶಿವಮೊಗ್ಗ ಬಳಿ ಅಪಘಾತ : ಕೂಡ್ಲಿಗಿ ವ್ಯಕ್ತಿ ಸಾವು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.15 :- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಹೊಳೆಬೆನವಳ್ಳಿ ಗ್ರಾಮದ ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಗುರುವಾರ ರಾತ್ರಿ ಜರುಗಿದ್ದು ಶುಕ್ರವಾರ ಮದ್ಯಾಹ್ನ ಪ್ರಕರಣ ದಾಖಲಾಗಿದ್ದು ಮೃತ ಪಟ್ಟ ಬೈಕ್ ಸವಾರ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೆಳ್ಳಕಟ್ಟೆ ಗ್ರಾಮದವನೆಂದು ತಿಳಿದಿದೆ.
ಕೂಡ್ಲಿಗಿ ತಾಲೂಕಿನ ಬೆಳ್ಳಕಟ್ಟೆ ಗ್ರಾಮದ ಹನುಮಂತಪ್ಪನವರ ಸಂತೋಷ (32) ಮೃತಪಟ್ಟ ನತದೃಷ್ಟ ಬೈಕ್ ಸವಾರನಾಗಿದ್ದಾನೆ ಎಂದು ತಿಳಿದಿದೆ. ಈತನು ಶಿವಮೊಗ್ಗದ ಜಲಜೀವನ್ ಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದನು ಈಗ್ಗೆ ಕೆಲ ದಿನಗಳಿಂದ ಕೆಲಸವಿಲ್ಲದೆ ಸ್ವಗ್ರಾಮದಲ್ಲಿ ರೈತಾಪಿ ಜೀವನ ನಡೆಸಿಕೊಂಡು ಹೋಗುತ್ತಿದ್ದ ಆದರೆ ಮೂರು ದಿನದ ಹಿಂದೆಯಷ್ಟೇ ಶಿವಮೊಗ್ಗಕ್ಕೆ ಹೋಗಿದ್ದ ಸಂತೋಷನು ಹೊಳೆಹೊನ್ನೂರಿನಿಂದ ಶಿವಮೊಗ್ಗ ಕಡೆ ಬೈಕಿನಲ್ಲಿ ಹೋಗುತ್ತಿರುವಾಗ್ಗೆ ಎದುರಿಗೆ ಬಂದ ಕಾರಿನ ಚಾಲಕ ಶಿವಮೊಗ್ಗದಿಂದ ಹೊಳೆಹೊನ್ನೂರು ಕಡೆಗೆ ಅತಿವೇಗ ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ಎದುರಿಗೆ ಬರುತ್ತಿದ್ದ ಬೈಕ್ ಗೆ ದಿಕ್ಕಿಹೊಡೆದ ಪರಿಣಾಮ ಬೈಕಿನ ಸಮೇತ ಬಿದ್ದ ಸವಾರ ಬೆಳಕಟ್ಟೆ ಸಂತೋಷ ತಲೆ, ಕೈ ಇತರೆಡೆ ತೀವ್ರಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ಬೆಳ್ಳಕಟ್ಟೆ ಕೊಟ್ರೇಶ ನೀಡಿದ ದೂರಿನಂತೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಸಂತೋಷನ ಮೃತದೇಹವನ್ನು ಸ್ವಗ್ರಾಮ ಕೂಡ್ಲಿಗಿ ತಾಲೂಕಿನ ಬೆಳ್ಳಕಟ್ಟೆ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಮೃತನ ಸಂಬಂದಿಗಳು ತಿಳಿಸಿದ್ದಾರೆ.
6ವರ್ಷದ ಮಗು ಅನಾಥ : ಮೃತ ಸಂತೋಷನಿಗೆ ಓರ್ವ 6 ವರ್ಷದ ಸಂಜಯಕುಮಾರ ಎನ್ನುವ ಮಗನಿದ್ದು ಎರಡು ವರ್ಷದ ಹಿಂದೆ ಸಂತೋಷನ ಪತ್ನಿ ಮಂಜುಳಾ ಸಹ ಮೃತಪಟ್ಟಿದ್ದು ಈಗ ಸಂತೋಷ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ 6 ವರ್ಷದ ಮಗ ತಂದೆ -ತಾಯಿ ಕಳಕೊಂಡು ಅನಾಥವಾಗಿದೆ. ತಂದೆಯ ಅಂತ್ಯಕ್ರಿಯೆ ವೇಳೆ  ಆ ಮಗುವಿನ ಕಂಬನಿ ನೋಡಿ ಅಲ್ಲಿದ್ದವರ ಕರುಳು ಚುರ್ ಎನ್ನುವಂತಾಗಿತ್ತು.