ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪ್ರಗತಿ ಪರಿಶೀಲನಾ ಸಭೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಜೂ15: ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಜೂನ್ 14ರಂದು ವಿಜಯನಗರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಸಫಾಯಿ ಕರ್ಮಚಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ನಡೆದ ಸಭೆಯಲ್ಲಿ ಹೊಸಪೇಟೆ, ಕಮಲಾಪುರ, ಹಡಗಲಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು, ಪೌರ ಕಾರ್ಮಿಕರ, ಬಳಿಕ ಪೌರ ಕಾರ್ಮಿಕ ಯುನಿಯನ್ ಪದಾಧಿಕಾರಿಗಳ ಮತ್ತು ಹೊರಗುತ್ತಿಗೆ ಏಜೆನ್ಸಿದಾರರೊಂದಿಗೆ ನಾನಾ ವಿಷಯಗಳನ್ನು ಚರ್ಚಿಸಿದರು. ವಿಜಯನಗರ ಜಿಲ್ಲೆಯ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು, ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಪೌರ ಕಾರ್ಮಿಕರ ಅಹವಾಲು ಆಲಿಸಿದ್ದು ವಿಶೇಷವಾಗಿತ್ತು.
‘ನಿಮ್ಮ ಪಿಎಫ್ ನಂಬರ್, ಇಎಸ್‍ಐ ನಂಬರ್ ಗೊತ್ತಿದೆಯಾ? ಮೆಡಿಕಲ್ ಇನ್ಶೂರನ್ಸ್ ಇದೆಯಾ? ಎಂದು ಪೌರ ಕಾರ್ಮಿಕರಿಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಪೌರ ಕಾರ್ಮಿಕರಿಗೆ ಕೊನೆಯ ಬಾರಿ ಆರೋಗ್ಯ ಶಿಬಿರ ಯಾವಾಗ ನಡಿಸಿದ್ದೀರಿ? ಎಂದು ನಗರಸಭೆ ಅಧಿಕಾರಿಗಳಿಗೆ ಕೇಳಿದರು. ವೇತನ ಪಾವತಿ ಸರಿಯಾದ ಸಮಯಕ್ಕೆ ಆಗುತ್ತಿದೆಯೇ? ನೀವು ಪ್ರತಿದಿನ ಕೆಲಸ ಮಾಡುವ ಅವಧಿ ಎಷ್ಟು? ಎಂದು ಕೇಳಿ ಬ್ಯಾಂಕಿನ ಖಾತೆಗೆ ಪ್ರತಿ ಮಾಹೆ ಸರಿಯಾದ ಸಮಯಕ್ಕೆ ಜಮಾ ಆಗುತ್ತಿರುವುದರ ಬಗ್ಗೆ ಖಚಿತಪಡಿಸಿಕೊಂಡರು.
ಆರೋಗ್ಯ ಶಿಬಿರ ನಿಯಮಿತವಾಗಿ ನಡೆಸಿ: ಈ ಹಿಂದೆ ಆಯೋಗದಿಂದ ಸಭೆ ನಡೆದ ಬಗ್ಗೆ ಅಧ್ಯಕ್ಷರು ಕೇಳಿದರು. ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗವು ಸಂವಿಧಾನತ್ಮಕವಾಗಿ ರಚನೆಯಾಗಿದೆ. ಪೌರ ಕಾರ್ಮಿಕರ ರಕ್ಷಣೆಗೆ ಆಯೋಗವು ಬದ್ಧವಾಗಿದೆ ಎಂದು ತಿಳಿಸಿದ ಅಧ್ಯಕ್ಷರು, ಉತ್ತಮವಾದ ಆರೋಗ್ಯ ಪ್ರತಿಯೊಬ್ಬರ ಹಕ್ಕಾಗಿದೆ. ಪ್ರತಿಯೊಬ್ಬ ಪೌರ ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ಸಿಗುವ ನಿಟ್ಟಿನಲ್ಲಿ ಎಲ್ಲಾ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ವಾರದೊಳಗೆ ಆರೋಗ್ಯ ಶಿಬಿರಗಳು ನಡೆಯಬೇಕು ಎಂದು ನಿರ್ದೇಶನ ನೀಡಿದರು. 
ಖಾಯಂ ನೌಕರರ ಅಹವಾಲು ಆಲಿಕೆ: ಸಭೆಯಲ್ಲಿ ಅಧ್ಯಕ್ಷರು ಖಾಯಂ ಪೌರ ಕಾರ್ಮಿಕ ನೌಕರರೊಂದಿಗೆ ಸಹ ಮಾತನಾಡಿದರು. ಹೆಣ್ಣು ಮಕ್ಕಳ ಸಮಸ್ಯೆಯನ್ನೇ ಆಲಿಸಲೆಂದೇ ಒಂದು ಸಮಿತಿಯಿದೆ. ಆ ಸಮಿತಿ ಇರುವ ಬಗ್ಗೆ ನಿಮಗೆ ಗೊತ್ತಿದೆಯಾ? ಎಂದು ಮಹಿಳಾ ನೌಕರರಿಗೆ ಕೇಳಿ ಅವರ ಅಹವಾಲು ಆಲಿಸಿದರು. ಪೌರ ಕಾರ್ಮಿಕರಿಗೆ ಇರುವ ಸೌಕರ್ಯಗಳು, ಅವರ ಹಕ್ಕುಗಳು, ಅವರ ಕರ್ತವ್ಯಗಳು ಸೇರಿದಂತೆ ಮಾಹಿತಿಯ ಫಲಕವನ್ನು ಎಲ್ಲಾ ಪುರಸಭೆ ನಗರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಅಳವಡಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಲ್ಲಾ ಕಾರ್ಮಿಕರಿಗೂ ಮಾಹಿತಿಯುಳ್ಳ ಗುರುತಿನ ಚೀಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ:  ‘ನಮ್ಮ ಮಕ್ಕಳಿಗೆ ಈ ಕೆಲಸ ಬೇಡವೇ ಬೇಡ, ನಾವು ನಮ್ಮ ಮಕ್ಕಳನ್ನು ಓದಿಸುತ್ತಿದ್ದೇವೆ’ ಎಂದು ಕೆಲವು ಪೌರ ಕಾರ್ಮಿಕರು ಪ್ರತಿಕ್ರಿಯೆಗೆ ‘ಈ ಕೆಲಸ ನನ್ನಿಂದ ಕೊನೆಯಾಗಲಿ.. ನಮ್ಮ ಮಕ್ಕಳನ್ನು ಓದಿಸುತ್ತೇವೆ. ಅವರಿಗೆ ಈ ಕೆಲಸ ಬೇಡ’ ಎನ್ನುವ ನಿಮ್ಮ ಮನದ ವಿಷಯವನ್ನು, ವಿಚಾರವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ. ನಿಮಗೆ ಊಟವಿಲ್ಲದಿದ್ದರೂ ಪರವಾಗಿಲ್ಲ.. ನಿಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಿ.. ಎಂದು ಅಧ್ಯಕ್ಷರು ನೆರೆದಿದ್ದ ಎಲ್ಲ ಪೌರ ಕಾರ್ಮಿಕರಿಗೆ ಸಲಹೆ ಮಾಡಿದರು.
ನಿವೇಶನ ಕೊಡುತ್ತೇವೆ: ನಮಗಿನ್ನು ಮನೆಯಿಲ್ಲ. ನಮಗೆ ಮನೆ ಕೊಡಿ ಎಂದು ಕೆಲವು ಪೌರ ಕಾರ್ಮಿಕರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮನೋಹರ ಅವರು, ಪೌರ ಕಾರ್ಮಿಕರಿಗೆ ಮನೆ ಬೇಕು ಎನ್ನುವ ಬೇಡಿಕೆಯನ್ನು ಪರಿಗಣಿಸಿ ಆರು ತಿಂಗಳೊಳಗೆ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತ  ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲಿಂ ಪಾಷಾ, ಹೊಸಪೇಟೆ ನಗರಸಭೆ ಪೌರಾಯುಕ್ತ  ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದ್ದೀನ್, ನಗರಸಭೆಯ ಸಹಾಯಕ ಅಭಿಯಂತರ ಆರತಿ, ಹಿರಿಯ ಆರೋಗ್ಯ ನಿರೀಕ್ಷಕಿ ಲತಾ ಸೇರಿದಂತೆ ವಿವಿಧ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಪಾಲ್ಗೊಂಡಿದ್ದರು.   ವೆಂಕಟೇಶ ಕೆ. ಕಾರ್ಯಕ್ರಮವನ್ನು ನಿರ್ವಹಿಸಿದರು.