ಅನಿಮಿಯಾ ಮುಕ್ತ ಭಾರತಕ್ಕೆ ಸ್ಪಂದಿಸಿ: ಡಾ.ಕುಮಾರಸ್ವಾಮಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.15:- ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ, ಅನಿಮಿಯಾ ಮುಕ್ತ ಭಾರತಕ್ಕೆ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದ್ದು, ಜನರು ಕೂಡ ಈ ಯೋಜನೆಗಳಿಗೆ ಸ್ಪಂದಿಸಿ, ಅಗತ್ಯ ನೆರವು ಪಡೆದು ರೋಗದಿಂದ ಮುಕ್ತರಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ, ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ, ಕೆ.ಆರ್.ಆಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ರಕ್ತದಾನಿಗಳ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ರಕ್ತ ಹೀನತೆ (ಅನಿಮಿಯಾ) ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದ್ದು, ತೀರ್ವ ಸಂಕಷ್ಟದಲ್ಲಿರುವ ರೋಗಿಗಳಿಗೆ ರಕ್ತ ನೀಡುವುದೇ ಅಂತಿಮ ಮದ್ದು. ಇಂಥ ರೋಗಿಗಳ ಬದುಕಿಗೆ ರಕ್ತದಾನಿಗಳೇ ಆಸರೆ ಎಂದು ಹೇಳಿದರು.
35 ಲಕ್ಷ ಜನಸಂಖ್ಯೆ ಇರುವ ಮೈಸೂರು ಜಿಲ್ಲೆಯಲ್ಲಿ ಪ್ರತಿ ವರ್ಷ 35 ಸಾವಿರ ಮಹಿಳೆಯರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿಯಾಗುತ್ತಿದ್ದಾರೆ. ಇವರಲ್ಲಿ ರಕ್ತಹೀನತೆಗೆ ಒಳಗಾಗುವವರು ಅನೇಕ. ಉತ್ತಮ ಆಹಾರ, ಜೀವನಶೈಲಿಯ ಕೊರತೆಯಿಂದ ಯುವಜನತೆಗೂ ಈ ಸಮಸ್ಯೆ ಕಾಡುತ್ತಿದೆ ಎಂದರು.
ಅನಿಮಿಯಾ ಕಾಣಿಸಿಕೊಂಡ ಆರಂಭದಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ತುಡಿತ ಇದ್ದವರಿಗೆ ರಕ್ತದಾನ ಮಾಡುವುದು ಒಂದು ಸುಲಭದ ದಾರಿ. ಈ ಮನೋಭಾವ ಎಲ್ಲರಲ್ಲೂ ಜಾಗೃತವಾಗಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್ ರಕ್ತದ ಅಗತ್ಯವಿದೆ. ಆದರೆ, ಕೇವಲ 2.50 ಕೋಟಿ ಯೂನಿಟ್ ಮಾತ್ರ ರಕ್ತ ಲಭ್ಯವಾಗುತ್ತಿದೆ. ರಕ್ತದಾನ ಮಾಡಲು ಮತ್ತಷ್ಟು ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ರಕ್ತದಾನವೆಂದರೆ ಜೀವದಾನ, ಇದಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲ. ರಕ್ತದಾನದಿಂದ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ, ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತ ಆಗುವುದನ್ನು ಶೇ 80ರಷ್ಟು ಕಡಿಮೆ ಮಾಡುತ್ತದೆ. ರಕ್ತದ ಒತ್ತಡ, ಮಧುಮೇಹದಂಥ ರೋಗಗಳನ್ನು ತಡೆಯಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕಾಧಿಕಾರಿ ಡಾ.ಮೊಹಮ್ಮದ್ ಸಿರಾಜ್ ಅಹಮದ್, ಕೆ.ಆರ್.ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ.ಕುಸುಮಾ, ಸಾಮಾಜಿಕ ಅಧ್ಯಯನ ವಿಭಾಗದ ಅಧ್ಯಕ್ಷ ಚಂದ್ರಮೌಳಿ, ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷೆ ಸ್ವಪ್ನಾ, ಪೆÇ್ರ.ಪ್ರಮೋದ್ ಎಂ.ಗವಾರಿ, ಪೆÇ್ರ.ಎಚ್.ಪಿ.ಜ್ಯೋತಿ, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ.ಗಿರೀಶ್, ಕಾರ್ಯನಿರ್ವಾಹಕ ಟ್ರಸ್ಟಿ ಸಿ.ಜಿ.ಮುತ್ತಣ್ಣ, ವ್ರಿಕಂ ಅಯ್ಯಂಗಾರ್ ಇದ್ದರು.