ಉಪಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ಗದಗ,ಜೂ15: ಇಲಾಖೆಯ ಅಧಿಕಾರಿಗಳು ಜನಸಾಮಾನ್ಯರಿಗೆ ವಿವಿಧ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಮಯೋಚಿತವಾಗಿ ಪ್ರಾಮಾಣಿಕವಾಗಿ ನಿಷ್ಟೆಯಿಂದ ಕರ್ತವ್ಯ ನಿರ್ವಹಿಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ತಾಳ್ಮೆ ಹಾಗೂ ಸೌಜನ್ಯದಿಂದ ವರ್ತಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಸಾರ್ವಜನಿಕರಿಂದ ಅಹವಾಲು ಹಾಗೂ ಮನವಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸಂವಿಧಾನವು ಸಮಪಾಲು ಸಮಬಾಳು ಎನ್ನುವ ಪವಿತ್ರ ಧ್ಯೇಯೋದ್ದೇಶವನ್ನು ಹೊಂದಿದ್ದು ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಯುತ ಜೀವನ ನಡೆಸಲು ಅವರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕಾನೂನುಗಳು ಹಾಗೂ ವಿವಿಧ ಸೌಲಭ್ಯಗಳು ತಾಯಿ ಗರ್ಭದಲ್ಲಿರುವಾಗಲೇ ಆ ಮಗುವಿಗೆ ಪ್ರಾರಂಭವಾಗುತ್ತವೆ. ಸಂವಿಧಾನವು ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆಗಳನ್ನು ಕೊಟ್ಟಿದ್ದು ಅವುಗಳು ಸದುಪಯೋಗವಾಗಬೇಕು. ನಮಗೆ ದೇಶ ಏನು ಕೊಟ್ಟಿದೆ ಎನ್ನುವುದರ ಬದಲು ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ ಎಂದು ಪ್ರತಿಯೊಬ್ಬರೂ ತಮ್ಮಷ್ಟಕ್ಕೆ ತಾವೇ ಅರ್ಥೈಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸಭೆಯ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿ ಮಾತನಾಡಿ, ಸಾರ್ವಜನಿಕರು ಉಪಲೋಕಾಯುಕ್ತರಿಗೆ ತಮ್ಮ ಅಹವಾಲುಗಳನ್ನು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ನೂಕು ನುಗ್ಗಲಾಗದಂತೆ ಒಬ್ಬೊಬ್ಬರಾಗಿ ತಮ್ಮ ಅಹವಾಲುಗಳೊಂದಿಗೆ ಅಗತ್ಯದ ದಾಖಲೆಗಳನ್ನು ಲಗತ್ತಿಸಿ ದೂರು ನೀಡಲು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಸಂಕದ, ಸಂಪನ್ಮೂಲ ವ್ಯಕ್ತಿ ಪ್ರಕಾಶ ನಾಡಗೇರ, ಉಪನಿಬಂಧಕರಾದ ಅಮರನಾರಾಯಣ ಕೆ., ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿಎಂ ಪಾಟೀಲ, ಗದಗ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ, ಡಿವೈಎಸ್ಪಿ ವಿಜಯ ಬಿರಾದಾರ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಜಿ.ಎಸ್.ಪಲ್ಲೇದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು. ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಪ್ರಾಚಾರ್ಯರಾದ ಬಸವರಾಜ ಗಿರಿತಿಮ್ಮಣ್ಣವರ ಕಾರ್ಯಕ್ರಮ ನಿರ್ವಹಿಸಿದರು.