ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆ
ಗದಗ,ಜೂ15: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಇರುವ ಸೌಲಭ್ಯ ತಲುಪಿಸುವಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಅವರಿಗೆ ದೊರಕಬೇಕಾದ ವೇತನ ಸೌಲಭ್ಯಗಳನ್ನು ಒದಗಿಸುವಲ್ಲಿ ಶ್ರಮಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ವೆಂಕಟೇಶನ್ ಅವರು ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ನಿಗದಿಪಡಿಸಿದ ವೇತನ ಪಾವತಿಸುವುದು ಹಾಗೂ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವುದು ಅಧಿಕಾರಿಗಳು ಮಾಡಬೇಕು. ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ಗುತ್ತಿಗೆ ಏಜೆನ್ಸಿದಾರರು ಸಮಯಕ್ಕೆ ಸರಿಯಾಗಿ ನಿಗದಿಪಡಿಸಿದ ವೇತನ ಸೌಲಭ್ಯಗಳನ್ನು ವಿತರಿಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ವೇತನದೊಂದಿಗೆ ಇ.ಎಸ್.ಐ ಪಿಎಫ್ ಪಾವತಿಸುವ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಇದ್ದಲ್ಲಿ ಮಾತ್ರವೇ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಬೇಕು ಎಂದು ಸೂಚಸಿದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ನಿಗದಿಪಡಿಸಿದ ವೇತನಗಳು ಸಂದರ್ಭಾನುಸಾರ ನಿಗದಿತ ಸಮಯಕ್ಕೆ ಪಾವತಿಸುವ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು. ಕಾರ್ಮಿಕರ ಕೆಲಸಕ್ಕೆ ಸರಿಯಾಗಿ ವೇತನ ಸಂದಾಯ ಮಾಡುವ ಜವಾಬ್ದಾರಿ ಇಲಾಖಾ ಮುಖ್ಯಸ್ಥರದ್ದಾಗಿದ್ದು ಅದು ಸರಿಯಾಗಿ ಆಗುತ್ತಿರುವ ಬಗ್ಗೆ ಖಚಿತಪಡಿಸಕೊಳ್ಳಬೇಕು. ಅಲ್ಲದೇ ಕಾರ್ಮಿಕರಿಗೆ ಇರುವ ರಜೆ ಸೌಲಭ್ಯಗಳು ದೊರಕುತ್ತಿರುವ ಬಗ್ಗೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಜಿಲ್ಲೆಯ ವಿವಿಧ ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಆಗಮಿಸಿದ ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರೊಂದಿಗೆ ಆಯೋಗದ ಅಧ್ಯಕ್ಷ ಸಂಯಮದಿಂದ ಕುಂದುಕೊರತೆಗಳನ್ನು ಆಲಿಸಿ ವೇತನ ಹಾಗೂ ಇತರೇ ಸಂರಕ್ಷಣಾ ಸೌಲಭ್ಯಗಳು ವಿತರಣೆಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೆÇಲೀಸ ವರಿಷ್ಟಾದಿಕಾರಿ ಬಿ.ಎಸ್.ನೇಮಗೌಡ, ನಗರಸಭೆ ಪೌರಾಯುಕ್ತರಾದ ಪ್ರಶಾಂತ ವರಗಪ್ಪನವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್ , ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು , ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರು ಹಾಜರಿದ್ದರು.