ದೃಢ ಸಂಕಲ್ಪದಿಂದ ಮುನ್ನುಗ್ಗಿದರೆ ಗೆಲುವು ಸುಲಭ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.15:- ಸೋಲಿಗೆ ಹತಾಶರಾಗಬೇಡಿ, ದೃಢ ಸಂಕಲ್ಪ ಮಾಡಿ ಮುನ್ನುಗ್ಗಿದರೆ ಗೆಲುವು ಸುಲಭ ಎಂದು ಪ್ರವಾಸೋಧ್ಯಮ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಎಂ.ಕೆ.ಸವಿತ ಅಭಿಪ್ರಾಯಪಟ್ಟರು.
ಶುಕ್ರವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಗಂಗಾ ಸಭಾಂಗಣದಲ್ಲಿ ನಡೆಯುತ್ತಿರುವ 50 ದಿನಗಳ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಧನೆ ಮಾಡಲೇ ಬೇಕು ಎಂಬ ತುಡಿತ ಇದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು. ಆದರೆ, ಅದಕ್ಕೆ ಪರಿಶ್ರಮ ಬೇಕು. ಆಸೆಗೆ ತಕ್ಕ ಕನಸು ಕಾಣಿರಿ, ಅದಕ್ಕೆ ಪೂರಕವಾಗುವಂತೆ ಉತ್ತಮ ತಯಾರಿ ಮಾಡಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಎರಡು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು ಏನನ್ನು ಓದಬೇಕು? ಎಂಬುದನ್ನು ಒಂದು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಮಾದರಿ ಪ್ರಶ್ನೆಪತ್ರಿಕೆಗಳ ಸಹಾಯ ತೆಗೆದುಕೊಳ್ಳಬಹುದು. ಎರಡನೆಯದು ಪುನರ್ ಅಧ್ಯಯನ ಯಾವುದೇ ವಿಷಯ ಅಥವಾ ಸಂಗತಿಯನ್ನು ಒಂದೇ ಬಾರಿ ಓದಿ ಮುಗಿಸುವುದಕ್ಕಿಂತ ಅದನ್ನು ಸಮಯ ಸಿಕ್ಕಾಗೆಲ್ಲಾ ಪುನರ್ ಅಧ್ಯಯನ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಇರುವ ಗುಂಪಿನೊಂದಿಗೆ ಮುಕ್ತವಾಗಿ ಚರ್ಚೆ ಮಾಡಬೇಕು. ಅವುಗಳೆಲ್ಲವು ಪರೀಕ್ಷೆಗೆ ನೆರವಾಗುತ್ತವೆ ಎಂದು ತಾವು ಕೆಎಎಸ್ ಪರೀಕ್ಷೆಗೆ ತಯಾರಾದ ಬಗ್ಗೆ ವಿವರಣೆ ನೀಡಿ ಪರೀಕ್ಷಾರ್ಥಿಗಳನ್ನು ಹುರಿದುಂಬಿಸಿ ಹತಾಶೆ ಬಿಡಿ ದೃಢಸಂಕಲ್ಪ ಮಾಡಿ ಎಂದು ಕರೆ ನೀಡಿದರು.
ಕರಾಮುವಿ ಕುಲಪತಿ ಪೆÇ್ರ. ಶರಣಪ್ಪ ವಿ. ಹಲಸೆ ಮಾತನಾಡಿ, ಎಷ್ಟೇ ಎತ್ತರದ ಹುದ್ದೆಗೆ ಹೋದರು ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಬೇಕು, ಶಿವ ಶರಣರ ಆರಿವೇ ಗುರು ಎಂಬ ಅಂಶವನ್ನು ಮನನ ಮಾಡಿಕೊಳ್ಳಬೇಕು ಎಂದರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪೆÇ್ರ.ಕೆ.ಬಿ.ಪ್ರವೀಣ. ಶೈಕ್ಷಣಿಕ ಡೀನ್ ಪೆÇ್ರ.ಎನ್.ಲಕ್ಷ್ಮಿ, ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿಗಳಾದ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.