ದರ್ಶನ್‍ಗೆ ಗಲ್ಲು ಶಿಕ್ಷೆ ವಿಧಿಸಿ-ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.15:- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‍ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಹಿಂದೆ ಸಿನಿಮಾದಿಂದ ಸಾಕಷ್ಟು ವಿಷಯಗಳನ್ನು ತಿಳಿದು ನಾಯಕನಂತೆ ಆಗಬೇಕೆಂದು ಕನಸು ಕಾಣುತ್ತಿದ್ದರು. ಇದಕ್ಕೆ ಪ್ರೇರಣೆಯಂತೆ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್ ಅವರಂತಹ ನಟರು ಸಮಾಜಕ್ಕೆ ಮಾದರಿಯಾಗಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ನಟ ದರ್ಶನ್ ಕೊಲೆಯಂತಹ ನೀಚ ಕೃತ್ಯ ಮಾಡಿರುವುದು ಖಂಡನೀಯ. ತೆರೆಯ ಮೇಲೆ ನಾಯಕನಾಗಿ, ನಿಜ ಜೀವನದಲ್ಲಿ ಕೊಲೆಗುಡುಕನಾಗಿ ಒಂದು ಜೀವವನ್ನೇ ತೆಗೆದಿರುವುದು ಘೋರ ಅಪರಾಧ. ಹೀಗಾಗಿ ಆತನಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಚಲಚಿತ ವಾಣಿಜ್ಯ ಮಂಡಳಿ ದರ್ಶನ್ ಚಿತ್ರಗಳನ್ನು ಬಹಿಸ್ಕರಿಸಬೇಕು. ಯಾವುದೇ ಕಾರಣಕ್ಕೂ ಸೆನ್ಸಾರ್‍ನಿಂದ ಯಾವ ಸಿನಿಮಾ ಸಹ ಹೊರಗಡೆ ಬರಬಾರದು. ನಿರ್ಮಾಪಕರು, ನಿರ್ದೇಶಕರು ನಟಿಸಲು ಅವಕಾಶ ನೀಡಬಾರದು. ರಾಜ್ಯದ ಜನ ಈತನ ಸಿನಿಮಾ ನೋಡಬಾರದು. ಚಲನಚಿತ್ರ ವಾಣಿಜ್ಯ ಮಂಡಳಿ ರೇಣುಕಾ ಸ್ವಾಮಿಯವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲದೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವಾನ ಹೇಳಲು ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಹೋಗದಿರುವುದು, ಪರಿಹಾರ ಘೋಷಣೆ ಮಾಡದಿರುವುದು ಖಂಡನೀಯ. ನೊಂದ ಕುಟುಂಬದವರಿಗೂ ನಮಗೂ ಸಂಬಂಧವಿಲ್ಲಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಕೂಡಲೇ ಆ ಕುಟುಂಬದವರಿಗೆ ಪರಿಹಾರ ನೀಡಲಿಲ್ಲವೆಂದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನೊಂದ ಕುಟುಂಬದವರಿಗೆ ಪರಿಹಾರ ನೀಡಬೇಕು. ಪ್ರಕರಣದ ತನಿಖೆಯನ್ನು ಶೀಘ್ರದಲ್ಲೇ ಮುಗಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾ ಬೀದಿ ರವಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೇಸ್ ಬಾಬು, ಸಿದ್ದಪ್ಪ ಎಲ್‍ಐಸಿ, ಮಾಲಿನಿ, ಗೋವಿಂದರಾಜು, ಬೀಡಾ ಬಾಬು, ಹರೀಶ್, ಮಾದಪ್ಪ, ಅರವಿಂದ್ ಮನೋಹರ್, ಸುನಿಲ್, ಸ್ವಾಮಿ ಗೈಡ್, ಶಿವಣ್ಣ ನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.