ಮುಚ್ಚಿರುವ ಬಂಡಿ ರಸ್ತೆಯನ್ನು ಬಿಡಿಸಿಕೊಡುವಂತೆ ಒತ್ತಾಯ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.15: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಮುಚ್ಚಿಹೋಗಿರುವ ರೈತರ ಬಂಡಿ ರಸ್ತೆಯನ್ನು ಬಿಡಿಸಿಕೊಡಬೇಕು. ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಶಿಥಿಲವಾದ ಉಪ ನೊಂದಣಧಿಕಾರಿಗಳ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಅನುವು ಮಾಡಬೇಕು ಮತ್ತು ಉಪ ನೊಂದಣಧಿಕಾರಿಗಳ ಕಛೇರಿಯ ಶಿಥಿಲ ಕಟ್ಟಡದಲ್ಲಿರುವ ರೈತರು ನೂರಾರು ವರ್ಷಗಳ ದಾಖಲೆಗಳ ಸಂರಕ್ಷಣೆಗೆ ಕ್ರಮವಹಿಸುವಂತೆ ತಾಲೂಕು ರೈತಸಂಘ ಆಗ್ರಹಿಸಿದೆ.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದ ನಿಯೋಗ ತಹಸೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮೇಲಿನ ಬೇಡಿಕೆಗಳ ಈಡೇರಿಗೆ ಕ್ರಮವಹಿಸುವಂತೆ ಆಗ್ರಹಿಸಿತು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಿಂದ ಕಾಲೇಜು ಹಿಂಭಾಗಕ್ಕೆ ತೆರಳಲು ಸರ್ಕಾರಿ ಬಂಡಿ ರಸ್ತೆಯಿದೆ. ಇಂಜಿನಿಯರಿಂಗ್ ಕಾಲೇಜು ಪಟ್ಟಣದ ಪಾಲಿಟೆಕ್ನಿಕ್ ಆವರಣದಲ್ಲಿ ತಲೆಯೆತ್ತಿದ ಅನಂತರ ಕಾಲೇಜು ಆವರಣದ ಒಳಗಿನಿಂದ ಕಾಲೇಜಿನ ಹಿಂಭಾಗದ ಕೃಷಿ ಜಮೀನುಗಳಿಗೆ ರೈತರು ಹೋಗಲು ಅಡಚಣೆಯಾಗಿದೆ. ಪಾಲಿಟೆಕ್ನಿಕ್ ಆವರಣದೊಳಗಿನ ಸರ್ಕಾರಿ ರಸ್ತೆಯನ್ನು ಕಾಲೇಜಿನವರು ಮುಚ್ಚಿಕೊಂಡಿರುವುದನ್ನು ತೆರವುಗೊಳಿಸಿ ರೈತರ ಸಗುಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರೈತರು ಹತ್ತಾರು ಮನವಿ ಸಲ್ಲಿಸಿದರೂ ಇದುವರೆಗೂ ರಸ್ತೆಯನ್ನು ಬಿಡಿಸಿಕೊಡವ ಕೆಲಸ ಆಗಿಲ್ಲ. ಸರ್ಕಾರಿ ರಸ್ತೆಯನ್ನು ಮುಚ್ಚಿ ರೈತರ ಕೃಷ ಚಟುವಟಿಕೆಗಳಿಗೆ ಅಡ್ಡಿಪಡಿಸುವುದನ್ನು ರೈತಸಂಘ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಮೂಲ ನಕಾಶೆಯಂತೆ ಪರಿಶೀಲನೆ ನಡೆಸಿ ಮುಚ್ಚಿ ಹೋಗಿರುವ ರಸ್ತೆಯನ್ನು ತೆರವುಗೊಳಿಸಿ ಅಥವಾ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಕಾಲೇಜು ಹಿಂಭಾಗಕ್ಕೆ ಹೋಗಲು ಪರ್ಯಾಯ ದಾರಿ ಬಿಡಿಸಿಕೊಡುವಂತೆ ರೈತಸಂಘ ಒತ್ತಾಯಿಸಿತು.
ರೆಕಾರ್ಡ್ ರೂಂ ಸ್ಥಳಾಂತರಿಸಿ: ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಉಪ ನೊಂದನಧಿಕಾರಿಗಳ ಕಛೇರಿ ಸಂಪೂರ್ಣ ಶಿಥಿಲವಾಗಿದ್ದು ಆಡಳಿತಾತ್ಮಕ ಅನುಕೂಲಕ್ಕಾಗಿ ಉಪ ನೊಂದಣಾಧಿಕಾರಿಗಳ ಕಛೇರಿಯನ್ನು ಇದೇ ಆವರಣದಲ್ಲಿರುವ ಹಳೆಯ ತಾಲೂಕು ಕಛೇರಿಗೆ ವರ್ಗಾಹಿಸಲಾಗಿದೆ. ಕಛೇರಿ ವರ್ಗಾವಣೆಯಾಗಿದ್ದರೂ ಹಳೆಯ ದಾಖಲೆಗಳು ಶಿಥಿಲವಾದ ಕಟ್ಟಡದಲ್ಲಿಯೇ ಉಳಿದಿವೆ. ಉಪ ನೊಂದಣಾಧಿಕಾರಿಗಳ ಕಛೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ 1.27 ಕೋಟಿ ಹಣ ಮಂಜೂರಾಗಿದ್ದು ಹಳೆಯ ಶಿಥಿಲವಾದ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಅದೇ ಆವರಣದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ನೂತನ ಕಟ್ಟಡ ನಿರ್ಮಾಣವಾಗುವವರೆಗೆ ತಾಲೂಕು ಆಡಳಿತ ಸೌಧದ ಕಟ್ಟಡದಲ್ಲಿಯೇ ಅಗತ್ಯ ಕೊಠಡಿ ನೀಡಿ ಉಪ ನೊಂದಣಾಧಿಕಾರಿಗಳ ಕಛೇರಿಯ ಹಳೆಯ ದಾಖಲೆಗಳ ಸಂರಕ್ಷಣೆಗೆ ಕ್ರಮ ವಹಿಸುವಂತೆ ರೈತಸಂಘ ಒತ್ತಾಯಿಸಿತು.
ಪಟ್ಟಣದ ನಾಗಮಂಗಲ ರಸ್ತೆಯಲ್ಲಿ ತಹಸೀಲ್ದಾರ್ ವಸತಿ ಗೃಹಕ್ಕೆ ಮೀಸಲಾದ ಸರ್ಕಾರಿ ಜಾಗ ಅತಿಕ್ರಮಣವಾಗುತ್ತಿದೆ. ಸರ್ಕಾರಿ ಜಾಗವನ್ನು ಅತಿಕ್ರಮಕಾರರಿಂದ ತೆರವುಗೊಳಿಸಿ ಆಸ್ತಿ ಸಂರಕ್ಷಣೆಗೆ ಕ್ರಮವಹಿಸಿ ಅಥವಾ ತಹಸೀಲ್ದಾರ್ ವಸತಿ ಗೃಹದ ಜಾಗವನ್ನು ಉಪ ನೊಂದಣಾಧಿಕಾರಿಗಳ ನೂತನ ಕಟ್ಟಡ ನಿರ್ಮಾಣಕ್ಕೆ ನೋಂದಣಿ ಇಲಾಖೆಗೆ ಹಸ್ತಾಂತರಿಸುವಂತೆ ರೈತ ನಿಯೋಗ ಆಗ್ರಹಿಸಿತು.
ರೈತ ನಿಯೋಗದ ಮನವಿಯನ್ನು ಆಲಿಸಿದ ತಹಸೀಲ್ದಾರ್ ನಿಸರ್ಗಪ್ರಿಯ ತಕ್ಷಣವೇ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹೆಚ್.ಎಸ್. ನಾಗರಾಜು ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ರೈತರು ತಿರುಗಾಡಲು ಅಗತ್ಯ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದರು. ಕಾನೂನಿನ ಪ್ರಕಾರ ಮೂಲ ನಕಾಶೆಯಂತೆ ರೈತರಿಗೆ ಅಗತ್ಯ ರಸ್ತೆ ಬಿಟ್ಟುಕೊಡಲೇ ಬೇಕಾಗುತ್ತದೆ. ಪಾಲಿಟೆಕ್ನಿಕ್ ಆಸ್ತಿಯನ್ನು ದಾಖಲಿಸಿಕೊಡುವ ಸಂದರ್ಭದಲ್ಲಿಯೂ ನೀವು ರೈರಿಗೆ ಅಗತ್ಯ ಜಾಗ ಬಿಟ್ಟುಕೊಡುವುದಾಗಿ ತಾಲೂಕು ಆಡಳಿತಕ್ಕೆ ಭರವಸೆ ನೀಡಿದ್ದೀರಿ. ಆದರೆ ಅದನ್ನು ಇದುವರೆಗೂ ಜಾರಿಗೊಳಿಸಿಲ್ಲ ಎಂದು ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ನೆನಪಿಸಿದ ತಹಸೀಲ್ದಾರ್ ನಿಸರ್ಗಪ್ರಿಯ ಪಾಲಿಟೆಕ್ನಿಕ್ ಸಂಸ್ಥೆಯವರು ರೈತರ ರಸ್ತೆಯನ್ನು ಬಿಟ್ಟುಕೊಡದಿದ್ದರೆ ತಾವೇ ಭೂ ಮಾಪಕರನ್ನು ಕಳುಹಿಸಿ ಮೂಲ ನಕಾಶೆಯ ಅನುಸಾರ ರಸ್ತೆಯನ್ನು ಬಿಡಿಸಿಕೊಡುವುದಾಗಿ ರೈತರ ನಿಯೋಗಕ್ಕೆ ಭರವಸೆ ನೀಡಿದರು. ಹಳೆಯ ಶಿಥಿಲ ಕಟ್ಟಡದಲ್ಲಿರುವ ಉಪ ನೊಂದಣಧಿಕಾರಿಗಳ ಕಛೇರಿಯ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ತಾಲೂಕು ಆಡಳಿತ ಸೌಧದ ಕಟ್ಟಡದಲ್ಲಿ ಕೊಠಡಿ ನೀಡುವುದಾಗಿ ತಿಳಿಸಿದ ತಹಸೀಲ್ದಾರರು ತಾಲೂಕು ಕಛೇರಿಯ ಆವರಣದಲ್ಲಿರು ಉಪ ನೊಂದಣಾಧಿಕಾರಿಗಳ ಕಛೇರಿ ಕಟ್ಟಡ ಪಾರಂಪರಿಕ ಕಟ್ಟಡ ವ್ಯಾಪ್ತಿಗೆ ಬರುವುದಿಲ್ಲ ಎಂದು ರಾಜ್ಯ ಪ್ರಾಚ್ಯ ವಸ್ತು ಇಲಾಖೆ ತಿಳಿಸಿದೆ. ಆದ ಕಾರಣ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಇದ್ದ ಅಡಚಣೆ ನಿವಾರಣೆಯಾಗಿದೆ. ನಾಗಮಂಗಲ ರಸ್ತೆಯಲ್ಲಿರುವ ತಹಸೀಲ್ದಾರ್ ವಸತಿ ಗೃಹದ ಜಾಗದ ಒತ್ತುವರಿ ತೆರುವುಗೊಳಿಸಿ ಜಾಗದ ಸುತ್ತ ಮತ್ತೆ ಒತ್ತುವರಿಯಾಗದಂತೆ ತಂತಿಬೇಲಿ ಹಾಕಿಸುವುದಾಗಿ ತಿಳಿಸಿದರು.