ರಕ್ತದಾನ ಮಹತ್ವದ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಶಿಲ್ಪಾನಾಗ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.15- ಪ್ರತಿಯೊಬ್ಬರು ರಕ್ತದಾನ ಮಾಡಬಹುದು ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಯಾಗುವುದಿಲ್ಲ. ಈ ಕುರಿತು ಜನರಿಗೆ ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಭಿಪ್ರಾಯ ಪಟ್ಟರು.
ನಗರದ ರೋಟರಿ ಭವನದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರೋಟರಿ ಸಿಲ್ಕ್ ಸಿಟಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಮತ್ತು ಸಿಮ್ಸ್ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ದಾನಗಳಿಗಿಂತ ರಕ್ತದಾನ ಮಹಾದಾನವಾಗಿದೆ. ಅವಶ್ಯಕತೆ ಇರುವವರಿಗೆ ರಕ್ತ ನೀಡಿದರೆ ಅವರ ಜೀವ ಉಳಿಸಿದಂತಾಗುತ್ತದೆ. ನಾನು ಸಹ ಇದುವರೆಗೆ 6 ಬಾರಿ ರಕ್ತದಾನ ಮಾಡಿದ್ದೇನೆ. ರಕ್ತಕ್ಕಾಗಿ ಬೇರೆಕಡೆ ಹೋಗುವ ಬದಲು ಜಿಲ್ಲೆಯಲ್ಲಿಯೇ ದೊರೆತರೆ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 11 ಲಕ್ಷಜನ ಸಂಖ್ಯೆಯಿದ್ದು, ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆ, ತಾಲ್ಲೂಕು ಮಟ್ಟದ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆರೋಗ್ಯ ಸೇವೆಗಾಗಿ ಸೌಲಭ್ಯಗಳನ್ನು ಒದಗಿಸಲು ಬದ್ದರಾಗಿದ್ದೇವೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯ ರಕ್ತನಿಧಿ ಕೇಂದ್ರಕ್ಕೆ 12 ಸಾವಿರ ಯೂನಿಟ್ ರಕ್ತದ ಅವಶ್ಯತೆಯಿದೆ. ಆದರೆ 6 ರಿಂದ 7 ಸಾವಿರ ಯೂನಿಟ್ ರಕ್ತವು ಶಿಬಿರಗಳ ಮೂಲಕ ಸಂಗ್ರಹವಾಗುತ್ತಿದೆ. ರಕ್ತನಿಧಿ ಕೇಂದ್ರದ ಮೂಲಕ ಸೌಕರ್ಯಗಳನ್ನು ಹೆಚ್ಚಿಸಬೇಕಿದೆ. ಅಮೂಲ್ಯವಾದ ಸಮಯದಲ್ಲಿ ರಕ್ತ ಲಭಿಸಿದರೆ ಮತ್ತೊಂದು ಜೀವಕ್ಕೆ ಅನುಕೂಲವಾಗಲಿದೆ. ಎಲ್ಲರ ಸಹಕಾರದೊಂದಿಗೆ ರಕ್ತದಾನ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಹೇಳಿದರು.
ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷರಾದ ದೊಡ್ಡರಾಯ ಪೇಟೆ ಡಿ.ಎಸ್. ಗಿರೀಶ್ ಮಾತನಾಡಿ, 2004ರಿಂದಲೂ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ 2 ಸಾವಿರಕ್ಕೂ ಹೆಚ್ಚು ದಾನಿಗಳಿಂದ ರಕ್ತ ಸಂಗ್ರಹಿಸಲಾಗಿದೆ. ರೋಟರಿ ಸಿಲ್ಕ್ ಸಿಟಿಯಿಂದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಾಗುತ್ತಿದೆ ಎಂದರು.
ಇದೇ ವೇಳೆ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷರಾದ ಎಚ್.ಎಂ. ಅಜಯ್, ಸಂಜೀವಿನಿ ಟ್ರಸ್ಟ್‍ನ ಸತೀಶ್ ಕುಮಾರ್, ಅಗ್ನಿ ಶಾಮಕ ಠಾಣೆಯ ಜಯಪ್ರಕಾಶ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಿಬಿರದಲ್ಲಿ ಒಟ್ಟು 78 ಮಂದಿ ರಕ್ತದಾನ ಮಾಡಿದರು.
ಜಿಲ್ಲಾಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್, ಜಿಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಜಿಲ್ಲಾ ಮೇಲ್ವಿಚಾರಕರಾದ ಎನ್.ಜಿ. ಮಹದೇವ ಪ್ರಸಾದ್, ಡಾ. ತಾರಾ, ರಘು, ವೈದ್ಯರಾದ ಡಾ. ನಾಗಾರ್ಜುನ್, ರೋಟರಿ ಸಂಸ್ಥೆಯ ಪ್ರಕಾಶ್, ಆರ್.ಎಂ. ಸ್ವಾಮಿ, ಚಂದ್ರು, ರೋಟರಿ ಸಿಲ್ಕ್ ಸಿಟಿಯ ಅಧ್ಯಕ್ಷÀ ಅಕ್ಷಯ್, ಕಾರ್ಯದರ್ಶಿ ಮಾಣಿಕ್ ಚಂದ್‍ಶಿರ್ವಿ, ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯರಾದ ಡಾ. ದಿವ್ಯಾ, ಇತರರು ಕಾರ್ಯಕ್ರಮದಲ್ಲಿ ಇದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗ ವಿಶ್ವ ರಕ್ತದಾನಿಗಳ ದಿನಾಚರಣೆ ಜಾಗೃತಿ ಜಾಥಾಕ್ಕೆ ಕರ್ನಾಟಕ ಏಡ್ಸ್ ಪ್ರಿವೆನ್ಷ್ಷೆನ್ ಕಂಟ್ರೋಲ್ ಯೂನಿಟ್‍ಜಂಟಿ ನಿರ್ದೇಶಕರು ಹಾಗೂ ಆರೋಗ್ಯ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ. ಡಿ. ಜಯರಾಜು ಅವರು ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ವೈದ್ಯರಾದ ಡಾ. ಬಸವರಾಜೇಂದ್ರ, ಪ್ರಾಂಶುಪಾಲರಾದ ಗÀಂಗಮ್ಮ, ಉಪನ್ಯಾಸಕÀ ಮಧು ಇತರರಿದ್ದರು. ಜಾಥಾವು ಭುವನೇಶ್ವರಿ ವೃತ್ತದ ಮೂಲಕ ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ರೋಟರಿ ಭವನ ತಲುಪಿತು.