ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿ: ವೆಂಕಟೇಶ್ ಸೂಚನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.15- ಜಿಲ್ಲೆಯ ಪ್ರತಿಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಕೂಡ ಮಕ್ಕಳ ಗ್ರಾಮ ಸಭೆಯನ್ನು ನಡೆಸಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಕೆ ಸ್ವಾನ್ ಸಭಾಂಗಣದಲ್ಲಿ ಇಂದು ನಡೆದ ಬಾಲ್ಯ ವಿವಾಹ ನಿμÉೀಧ ಮತ್ತು ನಿಯಂತ್ರಣ ಕಾಯ್ದೆ, ಬಾಲ ನ್ಯಾಯಕಾಯ್ದೆ ಅನುμÁ್ಠನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ನಿಯಂತ್ರಣ ಕ್ರಮಗಳು, ಬಾಲ್ಯ ವಿವಾಹ ತಡೆಗಟ್ಟುವಿಕೆ ಅತ್ಯಂತ ಪ್ರಮುಖವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಉಂಟು ಮಾಡಬೇಕಾದ ಅಗತ್ಯ ವಿದೆ. ಮಕ್ಕಳ ರಕ್ಷಣೆಯ ಕಾನೂನು ಕಾಯ್ದೆಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.
ಈ ಹಿಂದೆ ನಡೆದ ಸಭೆಯಲ್ಲಿ ಚರ್ಚಿಸಿದ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ಹಾಗೂ ಆ ಸಮಸ್ಯೆಗೆ ತೆಗೆದುಕೊಂಡ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದ ವೆಂಕಟೇಶ್ ಅವರು ಸಮಸ್ಯೆಗೆ ಪರಿಹಾರ ದೊರೆಯದಿದ್ದಲ್ಲಿ ಸಂಬಂಧ ಪಟ್ಟವರ ವಿರುದ್ದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ನಡೆದಿರುವ ಬಾಲ್ಯ ವಿವಾಹಗಳ ಬಗ್ಗೆ ಮಾಹಿತಿ ಪಡೆದು ಇಂತಹ ಪ್ರಕರಣಗಳಲ್ಲಿ ಯಾವಕ್ರಮ ವಹಿಸಲಾಗಿದೆ ಎಂಬ ಬಗ್ಗೆ ವಿವರ ಪಡೆದರು. ಬಾಲ್ಯ ವಿವಾಹ ತಡೆಯುವ ಜವಾಬ್ದಾರಿ ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೀಮಿತವಾಗಿರುವುದಿಲ್ಲ. ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಬಾಲ್ಯ ವಿವಾಹ ತಡೆಗಟ್ಟಬೇಕು. ಪ್ರಕರಣಗಳ ಮಾಹಿತಿ ಸುಳಿವು ದೊರೆ ತರೆಕೂಡಲೇ ತಡೆಯ ಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ಶಾಲೆಯಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಪ್ರತಿ ವಿದ್ಯಾರ್ಥಿ ನಿಲಯಗಳಿಗೂ ಭೇಟಿ ನೀಡಿ ಸಮಸ್ಯೆಗಳು ಕಂಡು ಬಂದಲ್ಲಿ ಪರಿಹರಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ಮೂಲ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕು. ಮಕ್ಕಳ ಹಕ್ಕುಗಳು ಹಾಗೂ ಸೌಲಭ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.