ಎಬಿವಿಪಿ ರಾಜ್ಯಕಾರ್ಯಕಾರಿಣಿ ಸಭೆಯಲ್ಲಿ ವಿವಿಧ ವಿಷಯಗಳ ಚರ್ಚೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೫: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತದ ರಾಜ್ಯ ಕಾರ್ಯಕಾರಣಿ ಸಭೆಯು ಮಂಗಳೂರಿನ ಉಮಾದಮ್ ಸಭಾಂಗಣದಲ್ಲಿ ಸೆ. 21 ಮತ್ತು 22 ರಂದು ಎರಡು ದಿನಗಳ ಕಾಲ ಜರುಗಿತು ಎಂದು ದಾವಣಗೆರೆ ಪೂರ್ಣಾವಧಿ ಕಾರ್ಯಕರ್ತ ವಿಜಯ್ ಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ರಾಜ್ಯ ಉಪಾಧ್ಯಕ್ಷ ಡಾ. ಅಜಯ್ ಕುಮಾರ್, ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ ಕೋರಿ ಹಾಗೂ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್ ಕೆ  ಉಪಸ್ಥಿತರಿದ್ದರು ಎಂದರು.ಆರ್. ಗೋಪಿ ಮಾತನಾಡಿ, ಸಭೆಯಲ್ಲಿ ಸಂಘಟನಾತ್ಮಕ ವಿಚಾರಗಳಾದ 2024-25 ನೇ ಸಾಲಿನ ಸದಸ್ಯತ್ವ, ಶಾಖೆಗಳು, ವಿಸ್ತಾರಕ ಕೇಂದ್ರ, ಸಂಪರ್ಕ ಸ್ಥಾನ, ಕಾಲೇಜು ಘಟಕ, ಹಾಸ್ಟೆಲ್ ಘಟಕ ಹಾಗೂ ಆಯಾಮ ಗತಿವಿಧಿ, ಕಾರ್ಯದ ಕುರಿತು ಚರ್ಚೆಗಳನ್ನು ನಡೆಸಲಾಯಿತು. ಜಾಗತಿಕ ರಾಜಕಾರಣದಲ್ಲಿ ಭಾರತದ ಪಾತ್ರ ಎನ್ನುವ ವಿಷಯದ ಕುರಿತು ವಿಶೇಷ ಭಾಷಣವನ್ನು ತುಮಕೂರು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕೆ. ಸುರೇಶ್  ನೆರವೇರಿಸಿದರು. ಈ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಮತ್ತು ರಾಜ್ಯದ ವರ್ತಮಾನ ಪರಿಸ್ಥಿತಿ ಎನ್ನುವ ಕುರಿತು 2 ಕರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು ಎಂದರು.ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸಂಖ್ಯೆಯನ್ನು ಹೆಚ್ಚಿಸುವಂತೆ, ಸಮರ್ಪಕವಾಗಿ ವಿದ್ಯಾರ್ಥಿ ವೇತನ ವಿತರಿಸುವಂತೆ ಹಾಗೂ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.ಇದರೊಂದಿಗೆ ಹೆಣ್ಣು ಮಕ್ಕಳಲ್ಲಿ ಮಾನಸಿಕ ಸ್ಥೆರ್ಯ ತುಂಬಲು ಮಿಷನ್ ಸಾಹಸಿ ಕಾರ್ಯಕ್ರಮವನ್ನು ಆಯೋಜಿಸಲು ಕರೆ ನೀಡಲಾಯಿತು ಎಂದು ಮಾಹಿತಿ ನೀಡಿದರು.ಬಿ.ಕೆ. ತನಿಷಾ ಮಾತನಾಡಿ, ಈ ಬಾರಿಯ ರಾಜ್ಯ ಸಮ್ಮೇಳನ ಶಿವಮೊಗ್ಗದಲ್ಲಿ ಹಾಗೂ ವಿದ್ಯಾರ್ಥಿ ಸಂಸ್ಕೃತಿ ಚಳುವಳಿಯು ಮೈಸೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ಈ  ಸಾಲಿನಲ್ಲಿ 1,98,876 ಸದಸ್ಯತ್ವ, 121 ಶಾಖೆಗಳು, 160 ಸಂಪರ್ಕ ಸ್ಥಾನ, 215 ವಿಸ್ತಾರಕ ಕೇಂದ್ರ , 246 ಪಿಯು ಕಾಲೇಜ್ ಸಮಿತಿ. 263 ಡಿಗ್ರಿ ಕಾಲೇಜು ಸಮಿತಿಗಳನ್ನು ಹೊಂದಿರುತ್ತದೆ ಎಂದು ವಿವರಿಸಿದರು.ಸಭೆಯಲ್ಲಿ ರಾಜ್ಯ ಅಧ್ಯಕ್ಷರಾದ ಡಾ. ಸತೀಶ ಎಚ್ ಕೆ. ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶಿವಕುಮಾ‌ರ್ ಚಿರಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ರವಿ ಮಂಡ್ಯ, ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಡಾಂಗೆ ಹಾಗೂ ಪ್ರಾಂತ ಪದಾಧಿಕಾರಿಗಳು, ಪ್ರಾಂತ ಕಾರ್ಯಕಾರಿಣಿ ಸದಸ್ಯರು, ಆಯಾಮ, ಗತಿವಿಧಿ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ತಿಳಿಸಿದರು.