ಪೌರಕಾರ್ಮಿಕರು ಸದಾ ಶ್ರಮಿಸುವ ಕಾಯಕಯೋಗಿಗಳು – ಕಾವಲ್ಲಿ ಶಿವಪ್ಪನಾಯಕ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 25 :- ಪೌರಕಾರ್ಮಿಕರು  ಸುಂದರ ಹಾಗೂ ಸ್ವಚ್ಛತಾ ನಗರವನ್ನಾಗಿಸುವ  ಕಾಯಕಯೋಗಿಗಳು ಅವರ ಕಾಯಕವನ್ನು ಯಾರು  ಎಂದು ಕೀಳಾಗಿ ಕಾಣದೆ ಅವರ ಕಾಯಕಕ್ಕೆ ಕೈ ಮುಗಿದು ಶ್ಲಾಘನೇ ವ್ಯಕ್ತಪಡಿಸೋಣ ಎಂದು ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ತಿಳಿಸಿದರು.
ಅವರು ಪಟ್ಟಣದ ಪಟ್ಟಣ ಪಂಚಾಯತಿ ಆವರಣದಲ್ಲಿ ಆಯೋಜಿಸಿದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಸ್ವಚ್ಛತೆಗೆ ಪೌರ ಕಾರ್ಮಿಕರ ಕಾರ್ಯ ಅನನ್ಯವಾಗಿದೆ.
ಗ್ರಾಮ, ಪಟ್ಟಣ ಸೇರಿ ನಗರಗಳಲ್ಲಿ ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮೂಲಕ ಸಮಾಜದ ಸ್ವಾಸ್ತ್ಯ  ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುವ ಪೌರ ಕಾರ್ಮಿಕರ ಸೇವೆ ಅನನ್ಯವಾಗಿದೆ.ಪೌರಕಾರ್ಮಿಕರು ಸ್ವಚ್ಛತಾ ಕಾಯಕದಲ್ಲಿ ತೊಡಗದೆ ಹೋದರೆ ಇಡೀ ಪಟ್ಟಣವೇ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತದೆ ಅನಾರೋಗ್ಯ ತಾಂಡವವಾಡುತ್ತದೆ ಅವರ ಶ್ರಮದಾನ ಕಾಯಕವನ್ನು ಗೌರವಿಸುವ ಜೊತೆಗೆ ಅವರ ರಕ್ಷಣೆಗೆ ಮುಂದಾಗಬೇಕು ಸಮಾಜದಲ್ಲಿ ಅವರನ್ನು ಗೌರವಿತವಾಗಿ ಕಾಣಬೇಕು ಎಂದು ಶಿವಪ್ಪನಾಯಕ ತಿಳಿಸಿದರು.
ಪೌರಾಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ ಮಾತನಾಡಿ ಪೌರಾಕಾರ್ಮಿಕರು ಸುಂದರ ಹಾಗೂ ಸ್ವಚ್ಛತೆಯ ಆರೋಗ್ಯಕರ ಸಮಾಜದ  ನಿರ್ಮಾತೃಗಳು ಸಮಾಜದಲ್ಲಿ ಅವರ ಕಾಯಕ ಎಷ್ಟು ಕಷ್ಟವೋ ಅದಕ್ಕೆ ಪ್ರತಿಫಲವಾಗಿ ಜನತೆ ಅವರನ್ನು ಕೀಳಾಗಿ ಕಾಣದೆ ಅವರನ್ನು ಗೌರವಿತವಾಗಿ ಕಾಣಬೇಕು ಅಲ್ಲದೆ ಸರ್ಕಾರವು ಇವರ ಕಾಯಕಕ್ಕೆ ಬೇಕಾದ ಇವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಅಲ್ಲದೆ ಮಾಸಿಕ ವೇತನ ಮಂಜೂರು ಮಾಡುವಂತೆ ಮಾಡಿದಲ್ಲಿ ಅವರ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ಸಾಂಸಾರಿಕ ಜೀವನಕ್ಕೂ  ಸಹಕಾರಿಯಾಗುತ್ತದೆ ಎಂದರು.
ಪಪಂ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಮಾತನಾಡಿ, ಪಟ್ಟಣದಲ್ಲಿ ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತಾ ಕಾರ್ಯದ ಜೊತೆಗೆ ತಮ್ಮಗಳ   ಸುರಕ್ಷತೆ ಕಾಪಾಡಿಕೊಳ್ಳಿ ಹಾಗೂ ತಮ್ಮ  ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಪೌರ ಕಾರ್ಮಿಕರು ಶ್ರದ್ಧೆಯಿಂದ ತಮ್ಮ ಕಾಯಕ ಮಾಡುವುದರಿಂದ ಪಟ್ಟಣದಲ್ಲಿ ಸ್ವಚ್ಛ ಹಾಗೂ ಸುಂದರ ವಾತಾವರಣವಿರಲು ಕಾರಣವಾಗಿದೆ ಎಂದು ಪ್ರಶಂಸಿದರು.
ಪಟ್ಟಣದ ಹಿರಿಯ  ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಕೆ.ಲೀಲಾವತಿ ಪ್ರಭಾಕರ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ಜಿಲ್ಲಾಧ್ಯಕ್ಷ ಓಬಣ್ಣ, ತಾಲೂಕು ಅಧ್ಯಕ್ಷ ಅಜ್ಜಣ್ಣ ಸೇರಿ ಪಪಂ ಸದಸ್ಯರು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಇದ್ದರು.