ಸರ್ಕಾರಿ ನೌಕರರ ಒಕ್ಕೂಟದಿಂದ ನಾಳೆ ರಾಷ್ಟ್ರೀಯ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ25: ಪಿಎಫ್ ಆರ್‍ಡಿಎ ಕಾಯ್ದೆ, ಎನ್‍ಪಿಎಸ್, ಯುಪಿಎಸ್ ಪದ್ಧತಿಯನು ರದ್ದುಗೊಳಿಸಿ, ನಿಶ್ಚಿತ ಹಳೆಯ ಪಿಂಚಣಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದಿಂದ ಸೆ.26 ರಂದು ರಾಷ್ಟ್ರೀಯ ಪ್ರತಿಭಟನಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ರಂಗನಾಥ ಹವಾಲ್ದಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಪಿಂಚಣಿ ವ್ಯವಸ್ಥೆಯಿಂದ ಸರ್ಕಾರಿ ನೌಕರರ ನಿವೃತ್ತಿ ಜೀವನ ಸಂಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮರು ಸ್ಥಾಪಿಸುವುದು, ಕಟಾವಣೆಯಾಗಿರುವ ನೌಕರರ ವಂತಿಗೆಯನ್ನು ರಾಜ್ಯ ಸರ್ಕಾರಗಳಿಗೆ ಹಿಂದಿರುಗಿಸಲು ಕೇಂದ್ರ ಸರ್ಕಾರವು
ನಿರ್ದೇಶಿಸಬೇಕು.
ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡುವುದು. ಇನ್ನು ಮುಂದೆ ಗುತ್ತಿಗೆ, ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಡಬೇಕು. ಎಲ್ಲಾ ಗುತ್ತಿಗೆ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಆಡಳಿತ ಸುಧಾರಣೆ ಆಯೋಗ-2ರ ನೌಕರ ವಿರೋಧಿ ಶಿಫಾರಸ್ಸುಗಳನ್ನು ಹಿಂಪಡೆಯುವುದು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು. 5 ವರ್ಷಗಳಿಗೊಮ್ಮೆ ನಿಯಮಿತವಾಗಿ ವೇತನ ಪರಿಷ್ಕರಣೆ ಮಾಡುವುದು. ತಡೆ ಹಿಡಿದಿರುವ 18 ತಿಂಗಳ ತುಟ್ಟಿಭತ್ಯೆಯನ್ನು ಬಿಡುಗಡೆಗೊಳಿಸಬೇಕು
ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ ಊಟದ ವಿರಾಮದ ವೇಳೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ಎಲ್ಲ ಸರ್ಕಾರಿ ನೌಕರರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ನಾಗರಾಜ ಪತ್ತಾರ, ಬಿಸಾಟಿ ತಾಯಪ್ಪ ನಾಯಕ, ಹೊರಗುತ್ತಿಗೆ ನೌಕರರ ಸಂಘದ ಪ್ರಮುಖರಾದ ಮರಡಿ ಜಂಬಯ್ಯ ನಾಯಕ ಉಪಸ್ಥಿರಿದ್ದರು.