ತಂಬಾಕಿನಿಂದ ಮಕ್ಕಳನ್ನು ದೂರವಿಡಿ: ಎಂ.ಎಸ್.ದಿವಾಕರ
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ25: ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ, ತಂಬಾಕಿನಿಂದ ಮಕ್ಕಳನ್ನು ದೂರವಿಡಲು ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಹಾಗೂ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೋಪ್ಟಾ ಕಾಯ್ದೆ ಸೆಕ್ಷನ್ 6 (ಬಿ) ಅಡಿಯಲ್ಲಿ ಶಾಲಾ ಕಾಲೇಜುಗಳ 100 ಗಜದ ಸುತ್ತಳತೆಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ದಂಡ ವಿದಿಸಬೇಕು. ಜಿಲ್ಲೆಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಸಂಖ್ಯೆ ಹಾಗೂ ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ ತಂಬಾಕು ಪರವಾನಿಗಿ ನೀಡಿದ ಸಂಖ್ಯೆಗಳ ಸಂಪೂರ್ಣ ವರದಿ ನೀಡಬೇಕು.
ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ಹೊಟೆಲ್‍ಗಳು ಮತ್ತು ರೈಲ್ವೆ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದರು.
ಪೊಲೀಸ್ ಇಲಾಖೆಯವರು ಕೋಪ್ಟಾ ಕಾಯ್ದೆ 2003ರ ಸೆಕ್ಷನ್ 4, 5, 6ಎ, 6ಬಿ ಮತ್ತು 7ರ ಅಡಿಯಲ್ಲಿ ಪ್ರತಿ ತಿಂಗಳ ಪ್ರಕರಣಗಳನ್ನು ದಾಖಲು ಮಾಡಿ ಮಾಹಿತಿ ನೀಡಬೇಕು. ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ವರದಿ ಸಲ್ಲಿಸಬೇಕು ಎಂದು ಹೇಳಿದರು.
ತಂಬಾಕು ಉತ್ಪನ್ನಗಳ ಪಾಕೇಟ್ ಮೇಲೆ, ಅದರ ಸೇವನೆಯಿಂದ ಉಂಟಾಗುವ ಪರಿಣಾಮದ ಚಿತ್ರ ಇರಬೇಕು. ಇಲ್ಲವಾದರೆ ಆ ಉತ್ಪನ್ನಗಳ ವಿರುದ್ದ ಕಾನೂನು ಕ್ರಮ ಜರುಗಿಸಿ. ಜಿಲ್ಲೆಯಲ್ಲಿ ಬೀಡಿ ಕಟ್ಟುವ ಕಾರ್ಮಿಕರ ಸಂಖ್ಯೆ ಮತ್ತು ತಂಬಾಕು ಉತ್ಪದನ ಘಟಕಗಳ ಮಾಹಿತಿ, ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಬರುವ ಬಸ್ ನಿಲ್ದಾಣ ಹಾಗೂ ಘಟಕಗಳಲ್ಲಿ ಸೆಕ್ಷನ್-04 ನಾಮಫಲಕಗಳ ಅಳವಡಿಸಿರುವ ಮಾಹಿತಿ ಹಾಗೂ ದಂಡ ಸಂಗ್ರಹಿಸಿದ ವಿವರದ ವರದಿಯ ನೀಡಬೇಕು.
ಪ್ರತಿ ತಿಂಗಳು 5ನೇ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಸಾರಿಗೆ, ಆರೋಗ್ಯ, ಶಿಕ್ಷಣ, ಪೊಲೀಸ್, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಅಬಕಾರಿ ಇಲಾಖೆಗಳ ಮುಖ್ಯಸ್ಥರು ಪ್ರಕರಣಗಳನ್ನು ದಾಖಲಿಸಿದ ವಿವರ ಹಾಗೂ ದಂಡದ ಹಣ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತ್ ಉಪ ಕಾರ್ಯದರ್ಶಿ ಬೀಮಪ್ಪ ಲಾಳಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸೂರಪ್ಪ ಡೊಂಬರಮತ್ತೂರ, ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಎಂ.ಪಿ.ದೊಡ್ಡಮನಿ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಷಣ್ಮುಖ ನಾಯಕ, ಆರೋಗ್ಯ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.