ಶಾಂತಿಯುತವಾಗಿ ಹಬ್ಬ ಆಚರಿಸಿ ಅಶಾಂತಿಗೆ ಕಾರಣವಾದರೆ ಮುಲಾಜಿಲ್ಲದೆ ಕ್ರಮ: ನ್ಯಾಮಗೌಡರ್ ಎಚ್ಚರಿಕೆ
ಬಸವಕಲ್ಯಾಣ:ಜೂ.15: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಹಬ್ಬದ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಸೇರಿದಂತೆ ಯಾವುದೇ ರೀತಿಯಲ್ಲಿ ಅನಗತ್ಯ ಗೊಂದಲ, ಗದ್ದಲ ಸೃಷ್ಟಿಸಲು ಪ್ರಯತ್ನಿಸಿದಲ್ಲಿ ಅಂಥವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಹುಮನಾಬಾದನ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ತಿಳಿಸಿದರು.
ಬಕ್ರೀದ್ ಹಬ್ಬದ ನಿಮಿತ್ತ ನಗರ ಪೊಲೀಸ್ ಠಾಣೆಯ ವತಿಯಿಂದ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಬ್ಬದ ಆಚರಣೆ ಸಂಭ್ರಮಕ್ಕೆ ಕಾರಣವಾಗಬೇಕೆ ವಿನಹ ಅಶಾಂತಿಗೆ ಕಾರಣವಾಗಬಾರದು ಎಂದು ಸಲಹೆ ನೀಡಿದರು.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸರಕಾರದ ನಿಯಮ ಹಾಗೂ ಮಾರ್ಗಸೂಚಿ ಅನುಸಾರವೇ ಬಲಿ ನೀಡುವ ಕಾರ್ಯ ನಡೆಸಬೇಕು. ನಿಯಮ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಗೊಂದಲ, ಗಲಭೆಗೆ ಸೃಷ್ಟಿಗೆ ಕಾರಣವಾಗುವ ಸಂದೇಶ ರವಾನಿಸಿದಲ್ಲಿ ಅಂಥವರ ವಿರುದ್ಧ ಮುಲಾಜಿಲ್ಲದೆ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ ಮಾತನಾಡಿ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಬ್ಬದ ವೇಳೆ ಸ್ವಚ್ಛತೆಗಾಗಿ ನಗರಸಭೆಯಿಂದ ಸಿಬ್ಬಂದಿಗಳನ್ನು ನೇಮಿಸುವ ಜೊತೆಗೆ ಅಗತ್ಯವಿರುವ ಸಹಾಯ, ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಸಿಪಿಐ ಅಲಿಸಾಬ್ ಮಾತನಾಡಿ, ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಚರಣೆಗೆ ಸಮಾಜದ ಎಲ್ಲರು ಕಾಳಜಿ ವಹಿಸಬೇಕು. ಈದ್ಗಾ ಸೇರಿದಂತೆ ನಗರದ ಎಲ್ಲಾ ಮಸೀದಿಗಳ ಬಳಿ ಪೆÇಲೀಸ್ ಸಿಬ್ಬಂದಿಗಳುನ್ನು ನೇಮಿಸಿ ಶಾಂತಿಯುತ ಹಬ್ಬ ಆಚರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ: ರವೀಂದ್ರನಾಥ, ನಗರ ಠಾಣೆ ಪಿಎಸ್‍ಐ ಅಂಬರೀಷ್ ವಾಗ್ಮೋಡೆ, ಸಂಚಾರಿ ಠಾಣೆ ಪಿಎಸ್‍ಐ ಸುವರ್ಣ ಮಲಶಟ್ಟಿ ಉಪಸ್ಥಿತರಿದ್ದರು