ಸರ್ಕಾರಿ ಕಾಲೇಜು ಅಭಿವೃದ್ಧಿಗೆ ೨ ಕೋಟಿ‌ಅನುದಾನ; ಶಾಸಕಿ ಲತಾ ಮಲ್ಲಿಕಾರ್ಜುನ್‌

ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಜೂ.೧೪; ಶತಮಾನ ದಾಟಿ ಮುನ್ನುಗ್ಗುತ್ತಿರುವ ಪಟ್ಟಣದ ಹೃದಯಭಾಗದಲ್ಲಿರುವ ಸ.ಪ.ಪೂ ಕಾಲೇಜು ಅಭಿವೃದ್ದಿಗೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ 2 ಕೋಟಿ ಮಂಜೂರಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.ಅವರು ಪಟ್ಟಣದ ಪ್ರೌಢ ಶಾಲಾ ವಿಭಾಗ ಒಳಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗೆ  ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.137 ವರ್ಷ ಇತಿಹಾಸ ಹೊಂದಿರುವ ಈ ಕಾಲೇಜು ಕಟ್ಟಡ ಶಿಥಿಲಗೊಂಡಿದ್ದು, ಇದರ ನವೀಕರಣಕ್ಕಾಗಿ ಕೆಕೆಆರ್‌ ಡಿ ಬಿ ಯೋಜನೆಯಲ್ಲಿ 2 ಕೋಟಿ ಅನುದಾನ ಬಂದಿದ್ದು, ಗುಣ ಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಅವರು ಗುತ್ತಿಗೆದಾರರಿಗೆ ಸೂಚಿಸಿದರು.ಬ್ರಿಟೀಷರ ಕಾಲದಲ್ಲಿ ಈ ಕಾಲೇಜು ಕಟ್ಟಡ ನಿರ್ಮಾಣವಾಗಿದ್ದು, ಈಗ ಶಿಥಿಲಗೊಂಡಿದೆ, ಪಾರಂಪರಿಕ ಕಟ್ಟಡ ಹಾಗೆ ಇರಿಸಿ ಕಟ್ಟವನ್ನು ನವೀಕರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುವುದು, ಆದರೆ ಶಿಕ್ಷಕರು ಶ್ರದ್ದೆಯಿಂದ ಕಲಿಸಲು ಒತ್ತು ನೀಡಬೇಕು ಹಾಗೂ ವಿದ್ಯಾರ್ಥಿಗಳು ಸಹ ಶ್ರದ್ದೆಯಿಂದ ಓದಿ ಮುಂದೆ ಬರಬೇಕು ಎಂದು ನುಡಿದರು.ದಚ್ಚು, ಕಿಚ್ಚು ಎಂಬ ಪ್ರೇರಣೆ ಇಟ್ಟುಕೊಳ್ಳಬೇಡಿ, ದಚ್ಚುನ ಕಥೆ ಏನಾಗಿದೆ ನೋಡಿ ಎಂದ ಅವರು ಭಗತ್‌ ಸಿಂಗ್, ಡಾ.ಅಬ್ದುಲ್‌ ಕಲಾಂ, ಮಹಾತ್ಮ ಗಾಂಧೀಜಿ ರಂತವರ ಪ್ರೇರಣೆ ಇಟ್ಟು ಕೊಂಡು ಅಭ್ಯಾಸ ಮಾಡಿ ಗುರಿ ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾದ್ಯಕ್ಷ ಇಸ್ಮಾಯಿಲ್‌ ಎಲಿಗಾರ, ಮುಖಂಡರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಪ್ರಾಚಾರ್ಯ ವೆಂಕಟೇಶ, ಉಪಪ್ರಾಚಾರ್ಯ ಬೆನಕಪ್ಪ, ಗುತ್ತಿಗೆದಾರ ಈಶ್ವರಪ್ಪ ನೀಲಗಾರ , ಮತ್ತೂರು ಬಸವರಾಜ, ಎಲ್‌.ಮಂಜನಾಯ್ಕ, ಎನ್.ಶಂಕರ, ಉಮಾಶಂಕರ,ಎಂ.ವಿ.ಕೃಷ್ಣ, ಶಿಕ್ಷಕರಾದ ಜಯಮಾಲತೇಶ, ಲತಾ ರಾಥೋಡ ಇತರರು ಉಪಸ್ಥಿತರಿದ್ದರು.