ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಅವಘಡ ಸಂಭವಿಸಿದಂತೆ ಎಚ್ಚರಿಕೆಯಿಂದ ಕ್ರಮ ವಹಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೫; ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಂತಹ ಯಾವುದೇ ಅಹಿತಕರ ಅವಘಡ ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಗತ್ಯ ಎಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರಿನ ಸೇವನೆಯಿಂದ ಸಾವುಂಟಾಗುವ ಪ್ರಕರಣಗಳು ಜರುಗಬಾರದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಂಬಂಧದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮ, ಜನವಸತಿ ಪ್ರದೇಶಗಳಲ್ಲಿ ಬರುವ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯಡಿಯಲ್ಲಿ ಬರುವ ಎಲ್ಲಾ ಪೈಪ್‍ಲೈನ್‍ಗಳನ್ನು ಪ್ರತಿದಿನವೂ ಕಣ್ಗಾವಲು ನಡೆಸಿ, ಯಾವುದಾದರೂ ಪೈಪ್‍ಲೈನ್‍ಗಳು ಹಾನಿಯಾಗಿರುವುದು ಕಂಡುಬಂದರೆ ಕೂಡಲೇ ದುರಸ್ಥಿ ಕಾರ್ಯ ಕೈಗೊಂಡು ಯಾವುದೇ ಕಲುಷಿತ ನೀರು ಕುಡಿಯುವ ನೀರಿನೊಂದಿಗೆ ಸೇರದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ ಎಲ್ಲಾ ನೀರು ಶೇಖರಣಾ ಘಟಕಗಳನ್ನು ಕಾಲ-ಕಾಲಕ್ಕೆ ಸ್ವಚ್ಛಗೊಳಿಸಿ ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಬೇಕು. ಮುಂದಿನ ಒಂದು ವಾರದೊಳಗೆ ಜಿಲ್ಲೆಯ ಎಲ್ಲಾ ಓವರ್ ಹೆಡ್ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಬೇಕು. ನೀರಿನ ಮೂಲಗಳಾದ ಕೊಳವೆಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ಹಾಗೂ ಕೊಳಚೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕೈಗೊಂಡು ಆ ನೀರಿನ ಮೂಲದ ಸುತ್ತಲೂ ಕಾಂಕ್ರಿಟ್‍ನಿಂದ ಕಟ್ಟೆ ಕಟ್ಟಬೇಕು ಎಂದು ತಿಳಿಸಿದರು.ಜಿಲ್ಲಾ ಮತ್ತು ತಾಲ್ಲೂಕು ಪ್ರಯೋಗಾಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು ಮಳೆಗಾಲದ ಮುನ್ನ ಮತ್ತು ಮಳೆಗಾಲದ ನಂತರ ಕಡ್ಡಾಯವಾಗಿ ಹಾಗೂ ಅವಶ್ಯಕವಿದ್ದಾಗ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಕಲುಷಿತ ಎಂದು ಕಂಡುಬರುವ ನೀರಿನ ಮೂಲಗಳಿಗೆ ಪರ್ಯಾಯವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.