ಕೃತಕ ಉತ್ಪಾದನೆ ಅಸಾಧ್ಯ, ಜೀವ ಉಳಿಸಲು ವರ್ಷಕ್ಕೊಂದು ಬಾರಿಯಾದರೂ ರಕ್ತದಾನ ಮಾಡೋಣ
ಸಂಜೆವಾಣಿ ವಾರ್ತೆ
ದಾವಣಗೆರೆ ಜೂ.೧೫: ತುರ್ತು ಸಂದರ್ಭದಲ್ಲಿ ಜೀವಗಳನ್ನುಳಿಸಲು ರಕ್ತದ ಅವಶ್ಯಕತೆ ಇರುತದೆ. ಈ ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಹಾಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲರೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕೆಂದು  ಆಡಳಿತ ವೈದ್ಯಾಧಿಕಾರಿ ಡಾ.ಗೀತಾ  ಹೇಳಿದರು.ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ  ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷÀನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲೆಯ ವಿವಿಧ ರಕ್ತ ಕೇಂದ್ರಗಳು, ಜಿಲ್ಲಾ ಆರ್.ಆರ್.ಸಿ ಕಾಲೇಜುಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳÀ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ, ದಾನದಲ್ಲಿ ಅತಿ ಶ್ರೇಷ್ಠ ದಾನ ರಕ್ತದಾನವೇ ಆಗಿದೆ. ಇದನ್ನು 2005 ರಿಂದ ರಕ್ತದಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಎಲ್ಲರೂ ರಕ್ತದ ಮಹತ್ವವನ್ನು ತಿಳಿದು ರಕ್ತದಾನಕ್ಕೆ ಮುಂದಾಗಬೇಕು ಎಂದರು.
ರಕ್ತದಾನ ಮಾಡುವುದರಿಂದ ರಕ್ತದಾನಿಗಳು ಆರೋಗ್ಯವಾಗಿರುತ್ತಾರೆ. ಕೆಲವರು ಅಪಘಾತ ದಿಂದ ಚಿಕಿತ್ಸೆ ಪಡೆಯುವವರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ತುರ್ತಾಗಿ ರಕ್ತ ಬೇಕಾಗುತ್ತದೆ, ಅಂತಹ ಸಮಯದಲ್ಲಿ ರಕ್ತದ ಅವಶ್ಯವಾಗಿದ್ದು, 18 ರಿಂದ 60 ರ ವಯಸ್ಕರು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ರಕ್ತದಾನವನ್ನು ಮಾಡುವಂತೆ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.