ಡಾ.ಬಸವರಾಜಗೆ ಶ್ರದ್ಧಾಂಜಲಿ, ನುಡಿನಮನ

ಸಂಜೆವಾಣಿ ವಾರ್ತೆ
ದಾವಣಗೆರೆ: ಅಕಾಲಿಕವಾಗಿ ನಿಧನರಾದ ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಬಸವರಾಜ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ವತಿಯಿಂದ ಬುಧವಾರ ಶ್ರದ್ಧಾಂಜಲಿ ಮತ್ತು ನುಡಿನಮನ ಸಲ್ಲಿಸಲಾಯಿತು. ಅಗಲಿದ ಅಧ್ಯಾಪಕನಿಗೆ ಮೌನಾಚರಣೆ ಮೂಲಕ ಗೌರವ ಅರ್ಪಿಸಲಾಯಿತು.ಸಭೆಯಲ್ಲಿ ಭಾಗವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ‘ಯಾರೊಬ್ಬರೂ ಶಾಶ್ವತವಲ್ಲ. ಆದರೆ ನಾವು ಮಾಡುವ ಕೆಲಸ ಮತ್ತು ಜನಪರ ಕಾಳಜಿಗಳು ಶಾಶ್ವತವಾಗಿ ಉಳಿಯುತ್ತವೆ. ಡಾ.ಬಸವರಾಜ ಕುಟುಂಬಕ್ಕೆ ವಿಶ್ವವಿದ್ಯಾನಿಲಯದಿಂದ ಲಭ್ಯವಿರುವ ನೆರವನ್ನು ನೀಡುವುದು. ವಿಶ್ವವಿದ್ಯಾನಿಲಯ ಶಿಕ್ಷಕರು ಅವರ ಕುಟುಂಬದವರ ನೋವಿನ ಸಾಂತ್ವನ ಹೇಳುವ ಜೊತೆಗೆ ರಕ್ಷಣೆಗೆ ನಿಲ್ಲಬೇಕು ಎಂದು ಸಲಹೆ ನೀಡಿದರು.ಕನ್ನಡ ವಿಭಾಗದ ಅಧ್ಯಕ್ಷ ಡಾ.ಬಿ.ಜಯರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳೇ ಶಿಕ್ಷಕನಿಗೆ ಭೂಷಣ. ಅವನ ಜ್ಞಾನ, ವಿದ್ಯೆ, ಜೀವನ ಶೈಲಿ ಎಲ್ಲವೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳೊಂದಿಗೆ ಸ್ನೇಹಿತನಾಗಿ ಕರ್ತವ್ಯ ನಿರ್ವಹಿಸಿದ ಡಾ.ಬಸವರಾಜ, ವಿದ್ಯಾರ್ಥಿಗಳ ಪಾಲಿಗೆ ಹೀರೊ ಆಗಿದ್ದರು ಎಂದು ಹೇಳಿದರು.ದಾವಣಗೆರೆ ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಶಿವಕುಮಾರ ಕಣಸೋಗಿ ಮಾತನಾಡಿ, ರಂಗ ಕಲಾವಿದನಾಗಿ, ನಿರ್ದೇಶಕನಾಗಿ, ಸ್ನೇಹಜೀವಿಯಾಗಿ, ಉತ್ತಮ ಶಿಕ್ಷಕನಾಗಿರುವುದಕ್ಕಿಂತ ಹೆಚ್ಚಾಗಿ ಮಾನವೀಯ ಗುಣಗಳೊಂದಿಗೆ ಡಾ.ಬಸವರಾಜ ಎಲ್ಲರ ಮನ ಗೆದ್ದಿದ್ದರು. ಅವರ ಹಾಸ್ಯಪ್ರಜ್ಞೆ, ವಿದ್ಯಾರ್ಥಿಗಳು ಮತ್ತು ಸಹೊದ್ಯೋಗಿಗಳ ಜೊತೆಗಿನ ಒಡನಾಟ ನಿತ್ಯ ಸ್ಮರಣೀಯ ಎಂದರು.