ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿಗೆ ಬೀಳ್ಕೊಡುಗೆ

ಸಂಜೆವಾಣಿ ವಾರ್ತೆ
ದಾವಣಗೆರೆ,ಜೂ.14; ಲೋಕಸಭಾ ಚುನಾವಣಾ ನಿಮಿತ್ತ ದಾವಣಗೆರೆ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿಗೆ ಜೂನ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.ಕಾರ್ಯಕ್ರಮವು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು ಅತ್ಯುತ್ತಮವಾದ ಅಧಿಕಾರಿಗಳ ತಂಡ ಇದ್ದುದರಿಂದ ಲೋಕಸಭಾ ಚುನಾವಣೆಯನ್ನು ಯಾವುದೇ ಸಮಸ್ಯೆಗಳು ಬಾರದಂತೆ ಮತ್ತು ಸುಲಲಿತವಾಗಿ ನಿರ್ವಹಣೆ ಮಾಡಲು ಸಾಧ್ಯವಾಯಿತು. ಚುನಾವಣಾ ಸಂದರ್ಭದಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ ಸಾಮಾನ್ಯವಾಗಿರುತ್ತದೆ. ಆದರೂ ಸಹ ಹೊಸದಾಗಿ ಜಿಲ್ಲೆಗೆ ಆಗಮಿಸಿ ಎಲ್ಲರೊಟ್ಟಿಗೆ ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಯವರ ಕೆಲಸವನ್ನು ಪ್ರಶಂಸೆ ಮಾಡಿದರು.ಈ ವೇಳೆ ಚುನಾವಣಾ ನಿಮಿತ್ತ ಜಿಲ್ಲೆಯಿಂದ ಬೆಳಗಾವಿಗೆ ವರ್ಗಾವಣೆಯಾಗಿ ತೆರಳಿದ್ದ ಪಿ.ಎನ್.ಲೋಕೇಶ್ ಅವರು ವರದಿ ಮಾಡಿಕೊಂಡಿದ್ದು ಸ್ವಾಗತಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿಯವರು ಇಲ್ಲಿನ ಸಿಬ್ಬಂದಿಯವರು ನನ್ನೊಟ್ಟಿಗೆ ಹಗಲಿರಳು ಕೆಲಸ ಮಾಡಿದರು. ಯಾವುದೇ ಒತ್ತಡವಿಲ್ಲದೆ ಎಲ್ಲರೊಟ್ಟಿಗೆ ಕೆಲಸ ಮಾಡಲು ಸಹಕಾರಿಯಾಗಿದ್ದು ಸೇವಾ ಅವಧಿಯಲ್ಲಿ ಅವಿಸ್ಮರಣೀಯ ದಿನಗಳಾಗಿವೆ ಎಂದರು.