ಗುಲಬರ್ಗಾ ವಿವಿಯಲ್ಲಿ ಒಣ ಕೃಷಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಘಟಕ ಸ್ಥಾಪನೆ ಕೌಶಲ್ಯ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲ : ಪ್ರೊ. ದಯಾನಂದ ಅಗಸರ
ಕಲಬುರಗಿ:ಜೂ.14: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಉನ್ನತಿ ಮತ್ತು ಸಂಶೋಧನೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಗುಲಬರ್ಗಾ ವಿಶ್ವವಿದ್ಯಾಲಯ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ಹಾಗೂ ಕೌಶಲ್ಯ ತರಬೇತಿ ಪಡೆಯಲು ವಿಶ್ವವಿದ್ಯಾಲಯ ಆವರಣದಲ್ಲಿ ಜೈವಿಕ ಅನಿಲ ಉತ್ಪಾದನೆ ಘಟಕವನ್ನು ಸ್ಥಾಪನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಪ್ರದೀಪ್ತಿ ಇಂಡಷ್ಟ್ರೀಸ್ ಪ್ರೈ. ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಜ್ಞಾನಗಂಗಾ ಆವರಣದ ಸೂಕ್ಷ್ಮಜೀವಶಾಸ್ತ್ರ ವಿಭಾಗ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ಉದ್ಯಾನದಲ್ಲಿ ಕರ್ನಾಟಕ ಸರ್ಕಾರದ ಪ್ರಸ್ತುತ ಕೆಬಿಐಟಿಎಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಐಡಿಯ2ಪಿಓಸಿ ಯೋಜನೆ-2022-23ರ ಅಡಿಯಲಿ ಆರಂಭಿಕ ಹಂತವಾಗಿ ಸ್ಥಾಪಿಸಿರುವ ಘಟಕ ಸ್ಥಾಪನೆಯನ್ನು ಉದ್ಘಾಟಿಸಿ ಮಾತನಾಡಿ ಅನನ್ಯ ತಂತ್ರಜ್ಞಾನ ಅಳವಡಿಸಿಕೊಂಡು ಒಣ ಕೃಷಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಘಟಕವನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಿರುವುದು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಪ್ರೋತ್ಸಾಹ ಸಿಗಲಿದೆ ಎಂದರು.
ಇತ್ತೀಚೆಗೆ ಭಾರತೀಯ ವ್ಯಾಪಾರ ವಲಯದಲ್ಲಿ ಜೈವಿಕ ಇಂಧನ ಮೂಲಗಳಿಗೆ ಬೇಡಿಕೆ ಹೆಚ್ಚಾಗಿದೆ. ಜಾನುವಾರಗಳ ಸಗಣಿ ಮತ್ತು ಸೂಪರ್ ನೇಪಿಯರ್ ಹುಲ್ಲು ಬಳಸಿ ಜೈವಿಕ- ನೈಸರ್ಗಿಕ ಅನಿಲವನ್ನು ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಇದರ ಉತ್ಪಾದನೆ ಮತ್ತು ಬಳಕೆಗೆ ಬೇಡಿಕೆಯಿದೆ. ಪ್ರದೀಪ್ತಿ ಇಂಡಷ್ಟ್ರೀಸ್ ಸಂಸ್ಥೆ ಒಣಗಿದ ಕೃಷಿ ತ್ಯಾಜ್ಯವನ್ನು ನೈಸರ್ಗಿಕ ಅನಿಲವನ್ನಾಗಿ ಪರಿವರ್ತಿಸಲು ವಿಶಿಷ್ಠ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಸ್ಥಾಪಿಸಲಾಗಿದೆ. ಸಚಿವಾಲಯದ ನೆರವು ಮತ್ತು ಪ್ರೋತ್ಸಾಹದಿಂದ ಈ ಭಾಗದಲ್ಲಿ ಕೈಗಾರಿಕ ವಲಯ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.
ಪ್ರದೀಪ್ತಿ ಇಂಡಷ್ಟ್ರೀಸ್ ಪ್ರೈ. ಲಿಮಿಟೆಡ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಮೋಹನ್ ರೆಡ್ಡಿ ಯೋಜನೆ ಕುರಿತು ಮಾತನಾಡಿ ಸರ್ಕಾರದ ಐಡಿಯ2ಪಿಓಸಿ ಯೋಜನೆ-2022-23ರ ಅಡಿಯಲ್ಲಿ ಪ್ರಾಂಭಿಕ ಅನುದಾನವಾಗಿ 25 ಲಕ್ಷ ರೂಪಾಯಿಯನ್ನು ಒದಗಿಸಿದೆ. “ಅಗ್ರೋವೇಸ್ಟ್ ಆಧಾರಿತ ಜೈವಿಕ ಸಂಕುಚಿತ ಅನಿಲ (ಬಯೋ-ಸಿಎನ್‍ಜಿ) ಉತ್ಪಾದನೆಗೆ ನಾವೀನ್ಯ ತಂತ್ರಜ್ಞಾನ” ಎಂಬ ಯೋಜನೆ ಶೀರ್ಷಿಕೆ ಅಡಿಯಲ್ಲಿ ಪ್ರಾಯೋಗಿಕವಾಗಿ (10 ಕ್ಯೂಬಿಕ್ ಮೀ) ಸಾಮಥ್ರ್ಯದ ಜೈವಿಕ ಅನಿಲ ಘಟಕವನ್ನು ಜ್ಞಾನಗಂಗಾ ಆವರಣದಲ್ಲಿ ಆರಂಭಿಕ ಹಂತದ ಪ್ರಯೋಗವಾಗಿ ಸ್ಥಾಪಿಸಲಾಗಿದೆ. ಇದರಿಂದ ಕೌಶಲ್ಯ ತರಬೇತಿ ಪಡೆಯುವ ಆಸಕ್ತರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಈ ಯೋಜನೆ ಶೈಕ್ಷಣಿಕವಾಗಿ ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಕೈಗಾರಿಕೋದ್ಯಮಿಗಳು, ಪಾಲುದಾರರು, ಉದ್ಯಮಿಗಳು ಸೇರಿದಂತೆ ಕೌಶಲ್ಯ ಅಭಿವೃದ್ಧಿ ಉತ್ಸಾಹಿಗಳಿಗೆ ತರಬೇತಿ ಮತ್ತು ಕೌಶಲ್ಯ ಕಲಿಕೆಗೆ ಉಪಯುಕ್ತವಾಗಿದೆ. ಇದರ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತು ಯುವ ಜನರ ಕಲಿಕೆಗೆ ಪ್ರೋತ್ಸಾಹ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ಹಣಕಾಸು ಅಧಕಾರಿ ಕು. ಗಾಯತ್ರಿ, ಆಡಳಿತ ವಿಶೇಷಾಧಿಕಾರಿ ಪ್ರೊ. ಚಂದ್ರಕಾಂತ ಕೆಳಮನಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀರಾಮುಲು, ವಿಜ್ಞಾನ ತಂತ್ರಜ್ಞಾಣ ನಿಕಾಯದ ಡೀನ್ ಪ್ರೊ. ಸಿ. ಸುಲೋಚನಾ, ಜೈವಿಕ ತಂರಜ್ಞಾನ ವಿಭಾಗದ ಪ್ರಾಧ್ಯಾಪಕಿ ಹಾಗೂ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಂಯೋಜಕಿ ಪ್ರೊ. ಎಂ.ಬಿ. ಸುಲೋಚನಾ, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ ಬೈರಪ್ಪ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಶಿವಶರಣಪ್ಪ ಗೊಳ್ಳೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮೊಳೆಗಾಂವ, ಪ್ರೊ. ಆರ್. ಎಲ್. ರಾಯಾಗಕರ್, ಪ್ರೊ. ಸಿ. ಸುಲೋಚನಾ, ಪ್ರೊ. ಜೆ. ಲಲಿತಾ, ಸ್ಥಳೀಯ ಅಭಿಯಂತರ ವಿಭಾಗದ ಕರರ್ಜಗಿ, ರಾಜಪ್ಪ ಸೇರಿದಂತೆ ಸೂಕ್ಷ್ಮಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಮುಂತಾದವರಿದ್ದರು.