ರಕ್ತದಾನದಿಂದ ಜೀವ ಉಳಿಸಲು ಸಾಧ್ಯ
ಕಲಬುರಗಿ:ಜೂ.14: ರಕ್ತದ ಬೇಡಿಕೆಯ ಪ್ರಮಾಣ ಮತ್ತು ರಕ್ತದಾನದ ಪ್ರಮಾಣದ ನಡುವೆ ಶೇ.40ರಷ್ಟು ವ್ಯತ್ಯಾಸವಿದೆ. ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕಾಗಿದೆ. ರಕ್ತದಾನ ಮಾಡಿದರೆ ಜೀವ ಉಳಿಸಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರÀವಾರ ಏರ್ಪಡಿಸಲಾಗಿದ್ದ ‘ವಿಶ್ವ ರಕ್ತದಾನಿಗಳ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಕ್ತದಾನದಿಂದ ಹೊಸ ರಕ್ತಕಣಗಳು ಉತ್ಪತ್ತಿಯಾಗಿ, ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ, ರಕ್ತದೊತ್ತಡ ಹಾಗೂ ಹೃದಯಾಘಾತ ಉಂಟಾಗುವ ಸಂಭವ ಕಡಿಮೆಯಾಗುತ್ತದೆ. ಕಿಡ್ನಿ ತೊಂದರೆಗಳು, ಮೆದುಳಿನ ರಕ್ತಸ್ರಾವದಿಂದಾಗುವ ಮೃತ್ಯು ಮತ್ತು ಇನ್ನಿತರ ಘೋರ ಕಾಯಿಲೆಗಳಿಂದ ದೂರವಿರಬಹುದಾಗಿದೆ. ರಕ್ತದಾನದಿಂದ ಸ್ವಂತ ಆರೋಗ್ಯ ವೃದ್ಧಿಸುವುದರ ಜೊತೆಗೆ ಮತ್ತೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ ಎಂದರು.
ರಕ್ತದಾನದಿಂದ ದೇಹಕ್ಕೆ ತೊಂದರೆಯಾಗುತ್ತದೆ ಎಂಬ ಭಯ, ತಪ್ಪು ಕಲ್ಪನೆಗಳಿವೆ. 18ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತ, ಕನಿಷ್ಠ 45 ಕೆ.ಜಿ. ತೂಕ ಇರುವವರು 350 ಎಂಎಲ್ ಮತ್ತು 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂ.ಎಲ್ ರಕ್ತದಾನ ಮಾಡಬಹುದು. ದಾನಿಗಳ ಹಿಮೋಗ್ಲೋಬಿನ್ ಪ್ರಮಾಣ ಕನಿಷ್ಠ 12.5 ಇರಬೇಕು. ಒಂದು ಉನಿಟ್ ರಕ್ತದಾನದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದೆ. ನಮ್ಮ ತಂಡ ಜಿಲ್ಲೆಯಾದ್ಯಂತ ರಕ್ತದಾನ ನೀಡಲು ಸದಾ ಸಿದ್ದವಾಗಿದ್ದು, ಆಸಕ್ತರು ಅದಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ರಕ್ತವು ಮಾನವನ ದೇಹದ ಉಳಿವಿಗೆ ಹಾಗೂ ಬೆಳವಣಿಗೆಗೆ ಅತ್ಯಂತ ಅವಶ್ಯಕವಾದಂತಹ ವಸ್ತುವಾಗಿದೆ. ರಕ್ತದಲ್ಲಿರುವ ಹಿಮೋಗ್ಲೋಬಿನವು ಆಕ್ಸಿಜನ್‍ನ್ನು ರಕ್ತದ ಮೂಲಕ ದೇಹದ ಎಲ್ಲಾ ಜೀವಕೋಶಗಳಿಗೆ ಪೂರೈಕೆ ಮಾಡುತ್ತದೆ. ಏನಾದರೂ ಅವಘಡಗಳು ಸಂಭವಿಸಿದಾಗ ಜೀವಕ್ಕೆ ಆಪತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ರೇಶ್ಮಾ ಆರ್.ನಕ್ಕುಂದಿ, ಸಂಗಮ್ಮ ಅತನೂರ, ಗಂಗಾಜ್ಯೋತಿ ಗಂಜಿ, ಶ್ರೀದೇವಿ ಸಾಗರ, ಚಂದ್ರಕಲಾ ಮಠಪತಿ, ಗುರುರಾಜ ಕೈನೂರ್, ಜಗನಾಥ ಗುತ್ತೇದಾರ, ನಾಗೇಶ್ವರಿ ಮುಗಳಿವಾಡಿ, ನಾಗಮ್ಮ ಚಿಂಚೋಳಿ, ಸಿದ್ರಾಮ ಹೊಸಮನಿ ಸೇರಿದಂತೆ ಇನ್ನಿತರರು ಹಾಜರಿದ್ದರು.