ಒಬ್ಬರ ರಕ್ತದಾನದಿಂದ ನಾಲ್ವರ ಜೀವ ಉಳಿಸಲು ಸಾಧ್ಯ
ಕಲಬುರಗಿ:ಜೂ.14: ರಕ್ತದ ಬೇಡಿಕೆಯ ಪ್ರಮಾಣ ಮತ್ತು ರಕ್ತದಾನದ ಪ್ರಮಾಣದ ನಡುವೆ ಶೇ.40ರಷ್ಟು ವ್ಯತ್ಯಾಸವಿದೆ. ಸ್ವಯಂಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕಾಗಿದೆ. ಒಬ್ಬರು ಒಂದು ಯುನಿಟ್ ರಕ್ತದಾನ ಮಾಡಿದರೆ ನಾಲ್ವರ ಜೀವ ಉಳಿಸಬಹುದಾಗಿದೆ ಎಂದು ಜೀವಶಾಸ್ತ್ರ ಉಪನ್ಯಾಸಕಿ ಶರಣಮ್ಮ ಭಾವಿಕಟ್ಟಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ‘ಸರ್ಕಾರಿ ಪದವಿ ಪೂರ್ವ ಕಾಲೇಜ್’ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಶುಕ್ರÀವಾರ ಏರ್ಪಡಿಸಲಾಗಿದ್ದ ‘ವಿಶ್ವ ರಕ್ತದಾನಿಗಳ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಕ್ತದಾನದಿಂದ ಹೊಸ ರಕ್ತಕಣಗಳು ಉತ್ಪತ್ತಿಯಾಗಿ, ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ, ರಕ್ತದೊತ್ತಡ ಹಾಗೂ ಹೃದಯಾಘಾತ ಉಂಟಾಗುವ ಸಂಭವ ಕಡಿಮೆಯಾಗುತ್ತದೆ. ಕಿಡ್ನಿ ತೊಂದರೆಗಳು, ಮೆದುಳಿನ ರಕ್ತಸ್ರಾವದಿಂದಾಗುವ ಮೃತ್ಯು ಮತ್ತು ಇನ್ನಿತರ ಘೋರ ಕಾಯಿಲೆಗಳಿಂದ ದೂರವಿರಬಹುದಾಗಿದೆ. ರಕ್ತದಾನದಿಂದ ಸ್ವಂತ ಆರೋಗ್ಯ ವೃದ್ಧಿಸುವುದರ ಜೊತೆಗೆ ಮತ್ತೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ ಎಂದರು.
ರಕ್ತದಾನದಿಂದ ದೇಹಕ್ಕೆ ತೊಂದರೆಯಾಗುತ್ತದೆ ಎಂಬ ಭಯ, ತಪ್ಪು ಕಲ್ಪನೆಗಳಿವೆ. 18ರಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತ, ಕನಿಷ್ಠ 45 ಕೆ.ಜಿ. ತೂಕ ಇರುವವರು 350 ಎಂಎಲ್ ಮತ್ತು 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂ.ಎಲ್ ರಕ್ತದಾನ ಮಾಡಬಹುದು. ದಾನಿಗಳ ಹಿಮೋಗ್ಲೋಬಿನ್ ಪ್ರಮಾಣ ಕನಿಷ್ಠ 12.5 ಇರಬೇಕು. ಒಂದು ಉನಿಟ್ ರಕ್ತದಾನದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದೆ. ನಮ್ಮ ತಂಡ ಜಿಲ್ಲೆಯಾದ್ಯಂತ ರಕ್ತದಾನ ನೀಡಲು ಸದಾ ಸಿದ್ದವಾಗಿದ್ದು, ಆಸಕ್ತರು ಅದಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ,ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಆಸ್ಮಾ ಜಬೀನ್, ನಯಿಮಾ ನಾಹಿದ್, ಮಲ್ಲಿಕಾರ್ಜುನ ದೊಡ್ಡಮನಿ, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಉಮಾದೇವಿ ಮಾಲಿಪಾಟೀಲ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಸೇವಕ ಭಾಗಣ್ಣ ಹರನೂರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.